
ಮಂಡ್ಯ ಜಿಲ್ಲಾದ್ಯಂತ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಂದ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಾಮಾಜಿಕ ಕಾರ್ಯಕರ್ತ ಮಧು ಆಗ್ರಹಿಸಿದರು.
ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗುವ ಕಟ್ಟಡಗಳ ನಿರ್ಮಾಣದಲ್ಲಿ ಬಾರಿ ಅವ್ಯವಹಾರ ನಡೆಸಿರುವ ಕೇಂದ್ರದ ನಿವೃತ್ತ ಯೋಜನಾ ವ್ಯವಸ್ಥಾಪಕ ನರೇಶ್ ನಾಲ್ಕಾರು ಕೋಟಿ ರೂ ಲಪಟಾಯಿಸಿದ್ದಾರೆ ಎಂದು ದೂರಿದರು.
ಮದ್ದೂರು ತಾಲೂಕಿನ ಹರಕನಹಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡದ ಕಾಮಗಾರಿ ಆರಂಭಿಸದೇ ಕಟ್ಟಡ ಕಾಮಗಾರಿಗೆ ಮೀಸಲಿಟ್ಟಿದ್ದ 25 ಲಕ್ಷ ರೂ.ಗಳಲ್ಲಿ ಮುಂಗಡ ಹಣ 18.75 ಲಕ್ಷ ರೂ ಬಿಡುಗಡೆಯಾಗಿದೆ. ಕೇಂದ್ರದ ಸಿಬ್ಬಂದಿಯೇ ಆದ ಸುನಿಲ್ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಠಿಸಿ, 1,02,610 ಲಕ್ಷ ರೂ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
2020-21 ನೇ ಸಾಲಿನ ಸಿಎಸ್ಆರ್ ಅನುದಾನದಡಿ ಜಿಲ್ಲೆಯ ಮಂಡ್ಯ, ಮಳವಳ್ಳಿ, ನಾಗಮಂಗಲ, ಕೆ.ಆರ್.ಪೇಟೆ, ಮದ್ದೂರು, ಪಾಂಡವಪುರ ತಾಲೂಕಿನಲ್ಲಿ ಐಟಿಐ ಕಾಲೇಜುಗಳ ವರ್ಕ್ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಲ್ಲಿಯೂ ಲಕ್ಷಾಂತರ ರೂ.ಗಳ ಅವ್ಯವಹಾರ ನಡೆಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ನೀಡಿದ್ದೇನೆ ಎಂದು ದಾಖಲೆಗಳನ್ನು ಮುಂದಿಟ್ಟರು.
ಇಷ್ಟಲ್ಲದೇ ಜಿಲ್ಲೆಯಲ್ಲಿ ಹೀಗೆಯೇ ಹಲವು ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸಿರುವ ನರೇಶ್ ಸುಮಾರು ನಾಲ್ಕು ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಭ್ರಷ್ಟಾಚಾರ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಡ್ಡಿ ಸಮೇತ ದುರುಪಯೋಗ ವಾಗಿರುವ ಹಣವನ್ನು ವಸೂಲಿ ಮಾಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.

Leave a Reply