Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮೊಳೆಕೊಪ್ಪಲಿನಲ್ಲಿ ಕೂಸಿನ ಮನೆ ಬಂದ್…?

ಮಂಡ್ಯ ತಾಲೂಕಿನ ಇಂಡವಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾಗಿದ್ದ  ಕೂಸಿನ ಮನೆಯ ಶಿಶು ಪಾಲನಾ ಕೇಂದ್ರವನ್ನು ಸರ್ಕಾರದ ಆದೇಶದಂತೆ ನಿರ್ವಹಣೆ ಮಾಡದೇ ಬಂದ್ ಮಾಡಲಾಗಿದೆ.


ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ 7 ತಿಂಗಳಿಂದ 3 ವರ್ಷದೊಳಗಿನ ಮಗುವನ್ನು ಲಾಲನೆ-ಪಾಲನೆಗೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕೂಸಿನ ಮನೆ ಯೋಜನೆ ಜಾರಿಗೊಳಿಸಿತ್ತು.

ಮಂಡ್ಯ ತಾಲೂಕಿನ ಇಂಡವಾಳು ಗ್ರಾಮ ಪಂಚಾಯಿತಿ ವತಿಯಿಂದ  ಮೋಳೆ ಕೊಪ್ಪಲು ಗ್ರಾಮದಲ್ಲಿ ಮಂಡ್ಯ ತಾಲೂಕಿನ ಪ್ರಪ್ರಥಮ ಕೂಸಿನ ಮನೆಯನ್ನು ಒಂದುವರೆ ವರ್ಷದ ಹಿಂದೆ ಪ್ರಾರಂಭಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಹಾಗೂ ಶ್ರೀರಂಗಪಟ್ಟಣ ಶಾಸಕ  ರಮೇಶ್ ಬಾಬು ಬಂಡಿ ಸಿದ್ದೇಗೌಡರು ಕೂಸಿನ ಮನೆಯನ್ನು ಮೊಳೆ ಕೊಪ್ಪಲು ಗ್ರಾಮದಲ್ಲಿ ಉದ್ಘಾಟಿಸಿದ್ದರು.

ಕೆಲವು ತಿಂಗಳಿನಿಂದ  ಕೂಸಿನ ಮನೆಗೆ ಬರುವ ( ಮೊಳೆ ಕೊಪ್ಪಲು ಗ್ರಾಮದ ಮಕ್ಕಳು ಮಾತ್ರ ಬರುತ್ತಿದ್ದರು )ಮಕ್ಕಳಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಲು ಇಂಡವಾಳು ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ ತೋರಿದ ಹಿನ್ನೆಲೆಯಲ್ಲಿ ಕೂಸಿನ ಮನೆಯನ್ನು ಒಂದೆರಡು ತಿಂಗಳಿನಿಂದ ಹಬ್ಬ ಇನ್ನಿತರ ನೆಪಗಳನ್ನು ಹೇಳುತ್ತಾ ಶಿಶು ಪಾಲನಾ ಕೇಂದ್ರವನ್ನು  ತೆರೆದಿಲ್ಲ ಎಂಬ ಮಾಹಿತಿಯು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಸರ್ಕಾರದ ಮಾರ್ಗಸೂಚಿಯಂತೆ ಕೂಸಿನ ಮನೆಗೆ ಬರುವ ಮಕ್ಕಳು ಕುಳಿತುಕೊಳ್ಳಲು, ಆಟವಾಡಲು ಬೇಕಾಗುವ ಪರಿಕರಗಳನ್ನು ಒದಗಿಸಿಲ್ಲ. ಅಲ್ಲದೆ ಮಕ್ಕಳಿಗೆ ಆಹಾರವನ್ನು  ತಯಾರಿಸಿ ನೀಡಲು ಬೇಕಾಗುವ ಪದಾರ್ಥಗಳನ್ನು ಸಕಾಲಕ್ಕೆ ಒದಗಿಸದೇ ನಿರ್ಲಕ್ಷ ತೋರಿಸಲಾಗಿದೆ ಎಂಬ ವಿಚಾರವು ಹರಿದಾಡುತ್ತಿದ್ದು,
ಮಕ್ಕಳನ್ನು ನೋಡಿಕೊಳ್ಳುವ ಕೇರ್ ಟೇಕರ್ ಗಳಿಗೂ ಸಹ ಸಕಾಲಕ್ಕೆ ನರೇಗಾ ಯೋಜನೆಯಡಿ ನೀಡುವ ಕೂಲಿ ಹಣವನ್ನು ಸಹ ಸರಿಯಾಗಿ ಪಾವತಿಸುತ್ತಿರಲಿಲ್ಲ. ಆದ್ದರಿಂದ ಕೇರ್ ಟೇಕರ್ ಗಳು ಸಹ ಕೂಸಿನ ಮನೆಯನ್ನು ತೆಗೆಯಲು ನಿರಾಶಕ್ತಿ ವಹಿಸುತ್ತಿದ್ದರಂತೆ,

ಕೂಸಿನ ಮನೆಗಳ ಉಸ್ತುವಾರಿ ನೋಡಿಕೊಳ್ಳಲು ತಾಲೂಕು ಪಂಚಾಯಿತಿ ಮಟ್ಟದಲ್ಲಿ ಕಾರ್ಯಕಾರಿ ಸಮಿತಿ ಇದ್ದು, ಆ ಸಮಿತಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯೇ ಅಧ್ಯಕ್ಷರಾಗಿರುತ್ತಾರೆ. ಸಮಿತಿಯು  ಮಕ್ಕಳಿಗೆ ಸಮತೋಲನ ಆಹಾರ ಒದಗಿಸಲು ನಿಗದಿಪಡಿಸಿರುವ ಪೋಷಕಾಂಶಗಳು ಇರುವುದನ್ನು ಖಾತರಿಪಡಿಸಿಕೊಳ್ಳುವುದು, ಆಹಾರ ಸಾಮಗ್ರಿಗಳು ನಿಗದಿತ  ಸಮಯದಲ್ಲಿ ಶಿಶುಪಾಲನ  ಕೇಂದ್ರಕ್ಕೆ ಸರಬರಾಜು ಆಗುತ್ತಿರುವುದನ್ನು  ಖಚಿತಪಡಿಸಿಕೊಳ್ಳುವುದು, ಶಿಶುಪಾಲನ ಕೇಂದ್ರಗಳ ಕುರಿತು ಪೋಷಕರ ಕುಂದು ಕೊರತೆ,ಪರಿಹಾರವನ್ನು ತಿಳಿಸಲು ಸಲಹಾ ಪೆಟ್ಟಿಗೆಯ ವ್ಯವಸ್ಥೆ ಮಾಡುವುದು,ಕೂಸಿನ ಮನೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳಿಗೂ ಒಮ್ಮೆ ಪ್ರಗತಿ ಪರಿಶೀಲನೆಯನ್ನು ನಡೆಸುವುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ನಿರ್ವಹಿಸಬೇಕಾಗಿರುತ್ತದೆ.

ಹೀಗಿದ್ದರೂ ಕೂಡ ಪ್ರತಿ ತಿಂಗಳು ಇಂಡವಾಳು ಗ್ರಾಮ ಪಂಚಾಯತಿಯ ಮೊಳೆ ಕೊಪ್ಪಲಿನಲ್ಲಿರುವ  ಶಿಶುಪಾಲನ ಕೇಂದ್ರದ ಅವ್ಯವಸ್ಥೆಗಳು ತಾಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೇ ಎಂಬುವುದೇ ಗೊತ್ತಾಗುತ್ತಿಲ್ಲ.

ಒಟ್ಟಿನಲ್ಲಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಇಂಡುವಾಳು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷದಿಂದ ಹಳ್ಳ ಹಿಡಿದಿದ್ದು, ಇದರ ಬಗ್ಗೆ ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾಹಿತಿಯನ್ನು ಪಡೆದು ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಜನರ ಧ್ವನಿ ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *

error: Content is protected !!