Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಅಧಿಕಾರಿಗಳು ಕಟ್ಟುನಿಟ್ಟಾಗಿ ಸರ್ಕಾರದ ನಿಯಮಗಳನ್ನು ಪಾಲಿಸಿ ; ಸಿಇಓ ನಂದಿನಿ

ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಕರ್ತವ್ಯದಲ್ಲಿ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಂಡ್ಯ ಜಿಲ್ಲಾ ಪಂಚಾಯತಿ ಸಿಇಒ ನಂದಿನಿ ಕೆಆರ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಸುತ್ತೋಲೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಎಲ್ಲಾ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬಿ.ಎಸ್.ಎನ್.ಎಲ್ ಮೊಬೈಲ್ ಸಿಮ್ ಗಳನ್ನು ನೀಡಿ, ಅವುಗಳನ್ನು ಬಳಕೆ ಮಾಡಲು ನಿರ್ದೇಶನ ನೀಡಿದ್ದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಳಕೆ ಮಾಡದೇ, ಕಚೇರಿ ಅವಧಿಯಲ್ಲಿ ಚಾಲನೆಯಲ್ಲಿ ಇಡದಿರುವುದು ಹಾಗೂ ಈ ನಂಬರಿನ ಬದಲಾಗಿ ವೈಯಕ್ತಿಕ ಖಾಸಗಿ ಮೊಬೈಲ್ ಸಂಖ್ಯೆಗಳನ್ನು ಬಳಸುತ್ತಿರುವುದು. ಇದರಿಂದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾಗಿ ಸಂಪರ್ಕಕ್ಕೆ ಸಿಗದೆ ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಅಹವಾಲುಗಳಿಗೆ ಸ್ಪಂದಿಸದಿರುವುದು ಕಂಡುಬಂದಿದ್ದರಿಂದ  ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಸುತ್ತೋಲೆಯಲ್ಲಿ ಸರ್ಕಾರದ ಕಚೇರಿಯ ಪ್ರಾರಂಭದ ಸಮಯ 10.00 ಗಂಟೆಗೆ ಕಡ್ಡಾಯವಾಗಿ ಹಾಜರಾಗುವುದು ಹಾಗೂ ಕಚೇರಿ ಅವಧಿ ಪೂರ್ಣವಾಗುವವರೆಗೆ ನಿಗಧಿಪಡಿಸಿದ ಸ್ಥಾನದಲ್ಲಿ ಇದ್ದು ಕರ್ತವ್ಯ ನಿರ್ವಹಿಸತಕ್ಕದ್ದು. ಕಚೇರಿ ಅವಧಿಯಲ್ಲಿ ನೌಕರರು ಅನ್ಯ ಕರ್ತವ್ಯದ ಮೇರೆಗೆ ತೆರಳಬೇಕಾಗಿದ್ದಲ್ಲಿ, ಚಲನ-ವಲನ ವಹಿಯಲ್ಲಿ ಸಕಾರಣವನ್ನು ವಿವರವಾಗಿ ನಮೂದಿಸಿ, ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯತಕ್ಕದು. ನಿಗಧಿತ ಕಾಲಾವಧಿಗಿಂತ ವಿಳಂಬವಾಗಿ ಹಾಜರಾಗುವ ಹಾಗೂ ಕಚೇರಿ ಅವಧಿಯಲ್ಲಿ ಸ್ವಸ್ಥಾನದಲ್ಲಿ ಇಲ್ಲದೆ ಚಲನ-ವಲನ ವಹಿಯಲ್ಲಿ ನಮೂದಿಸಿ, ಮೇಲಾಧಿಕಾರಿಗಳ ಅನುಮತಿ ಪಡೆಯದ ನೌಕರರ ವಿರುದ್ಧ ಸಕ್ಷಮ ಪ್ರಾಧಿಕಾರವು ಸೂಕ್ತ ಶಿಸ್ತುಕ್ರಮ ಜರುಗಿಸತಕ್ಕದ್ದು ಎಂದು ಸೂಚಿಸಿದ್ದಾರೆ.

ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ನ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ಕಚೇರಿ ನಿಯಮಗಳನ್ನು ಪಾಲಿಸದೇ ಇರುವ ಬಗ್ಗೆ ಸಾರ್ವಜನಿಕರುಗಳಿಂದ ಹಲವಾರು ದೂರುಗಳು ಸ್ವೀಕೃತವಾಗುತ್ತಿರುವುದರಿಂದ ಜಿಲ್ಲಾ, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ/ಸಿಬ್ಬಂದಿಗಳು ಈ ಕೆಳಕಂಡಂತೆ ಶಿಸ್ತುಬದ್ಧವಾಗಿ ಕಚೇರಿ ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.

* ಸರ್ಕಾರದ ಕಚೇರಿಯ ಪ್ರಾರಂಭದ ಸಮಯ 10.00 ಗಂಟೆಗೆ ಕಚೇರಿಗೆ ಹಾಜರಾಗಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸುವುದು.

 * ಜಿಲ್ಲಾ,ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ/ಸಿಬ್ಬಂದಿಗಳು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸುವುದು.

* ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಚೇರಿ ಅವಧಿಯಲ್ಲಿ ನೌಕರರು/ಅಧಿಕಾರಿಗಳು ಜಿಲ್ಲಾ/ತಾಲ್ಲೂಕು ಪಂಚಾಯತ್‌ಗಳಲ್ಲಿ ಕರೆಯುವ ಸಭೆಗಳಿಗೆ ಹಾಜರಾಗಬೇಕಾದಲ್ಲಿ ಅಥವಾ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಕ್ಷೇತ್ರ/ಸ್ಥಳ ಭೇಟಿ ನೀಡಲು ತೆರಳಿದ್ದಲ್ಲಿ ಭೇಟಿಯ ಉದ್ದೇಶ ಸ್ಥಳ ಮತ್ತು ಇತರೆ ಮಾಹಿತಿಯನ್ನು ಮತ್ತು ಅನ್ಯ ಕಾರ್ಯದ ಮೇರೆಗೆ ತಾಲ್ಲೂಕು ಪಂಚಾಯಿತಿ/ಗ್ರಾಮ ಪಂಚಾಯಿತಿ ಕಚೇರಿಯಿಂದ ತೆರಳಬೇಕಾಗಿದ್ದಲ್ಲಿ, ಚಲನ-ವಲನ ವಹಿಯಲ್ಲಿ ಸಕಾರಣವನ್ನು ವಿವರವಾಗಿ ನಮೂದಿಸಿ. ಸಂಬಂಧಪಟ್ಟ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆದು, ನಂತರ ಕಚೇರಿಯಿಂದ ಹೊರಗೆ ತೆರಳುವುದು.

* ತಾಲ್ಲೂಕು ಪಂಚಾಯಿತಿಗಳಲ್ಲಿ ನಿರ್ವಹಣೆ ಮಾಡಿದ ಚಲನ-ವಲನ ವಹಿಗಳನ್ನು ನೇಮಕ ಮಾಡಲಾಗಿರುವ ಜಿಲ್ಲಾ ಮಟ್ಟದ ತಾಲ್ಲೂಕು ನೋಡಲ್ ಅಧಿಕಾರಿಗಳು ಪರಿಶೀಲಿಸುವುದು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ನಿರ್ವಹಣೆ ಮಾಡಿದ ಚಲನ-ವಲನ ವಹಿಗಳನ್ನು ಪ್ರತಿ ಮಾಹೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಿಸುವುದು.

* ಪಂಚಾಯಿತಿ ಅಭಿವೃದ್ಧಿ ಅಧಿಕಾರಿ/ಪಂಚಾಯಿತಿ ಕಾರ್ಯದರ್ಶಿ/ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಗಳ ಪ್ರತಿ ಮಾಹೆ ಬಯೋಮೆಟ್ರಿಕ್ ಹಾಜರಾತಿಯ Online(ಆನ್‌ಲೈನ್) ಮಾಹಿತಿಯನ್ನು ಕಡ್ಡಾಯವಾಗಿ ಪಡೆದು ಪರಿಶೀಲಿಸಿ ,ತದನಂತರ ಪ್ರತಿ ಮಾಹೆ ವೇತನವನ್ನು ಪಾವತಿಸಲು ಸಂಬಂಧಪಟ್ಟ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮವಹಿಸುವುದು.

* ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ವಾಹನ ಚಾಲಕರುಗಳು/ಪುರುಷ ಗ್ರೂಪ್-ಡಿ ನೌಕರರು ಬಿಳಿಬಣ್ಣದ ಸಮವಸ್ತ್ರವನ್ನು ಮತ್ತು ಮಹಿಳಾ ಗ್ರೂಪ್-ಡಿ ನೌಕರರು ಸರ್ಕಾರ ನಿಗಧಿಪಡಿಸಿರುವ ಆಕಾಶ-ನೀಲಿ ಬಣ್ಣದ ಸೀರೆಯನ್ನು ಧರಿಸುವುದು.

* ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮಧ್ಯಾಹ್ನದ ಊಟದ ಸಮಯ 1.30 ರಿಂದ 2.30 ಇದ್ದು, ಸಮಯ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು.

* ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದಿಂದ ನೀಡಿರುವ ಬಿ.ಎಸ್.ಎನ್.ಎಲ್ ಸಿಯುಜಿ ಮೊಬೈಲ್ ಸಿಮ್‌ ಗಳನ್ನು ಕಡ್ಡಾಯವಾಗಿ ಬಳಕೆ ಮಾಡುವುದು, ಮೊಬೈಲ್ ಸ್ವಿಚ್ ಆಫ್ ಮಾಡದೆ ಸದಾಕಾಲ ಚಾಲನೆಯಲ್ಲಿಟ್ಟಿರುವುದು.

* ಪಂಚತಂತ್ರ ತಂತ್ರಾಂಶದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಿ.ಎಸ್.ಎನ್.ಎಲ್ ಸಿಯುಜಿ ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ನಮೂದಿಸುವುದು.

* ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ/ಸಿಬ್ಬಂದಿಗಳು ಕೇಂದ್ರಸ್ಥಾನದಲ್ಲಿ ಕಡ್ಡಾಯವಾಗಿ ವಾಸವಿರುವುದು.

* ತಾಲ್ಲೂಕು/ಗ್ರಾಮ ಪಂಚಾಯತ್ ಕಾರ್ಯಾಲಯಗಳ ಕೊಠಡಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸುವುದು ಹಾಗೂ ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಚಾಲನೆಯಲ್ಲಿರುವಂತೆ ನೋಡಿಕೊಳ್ಳುವುದು.

* ಸರ್ಕಾರಿ ಕಚೇರಿಗಳಲ್ಲಿನ ಕಾರ್ಯವಿಧಾನ ಕೈಪಿಡಿ ನಿಯಮಗಳಲ್ಲಿ ತಿಳಿಸಿರುವಂತೆ ತಾಲ್ಲೂಕು ಪಂಚಾಯಿತಿ/ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕಡ್ಡಾಯವಾಗಿ ದಿನಚರಿ ಮತ್ತು ವಿಷಯ ವಹಿಗಳನ್ನು ನಿರ್ವಹಣೆ ಮಾಡಿ ನಿಗಧಿತ ನಮೂನೆಯಲ್ಲಿ ಪ್ರತಿ ಮಾಹೆ ಘೋಷ್ಟಾರೆ ಹಾಕಿ ಸಂಬಂಧಪಟ್ಟ ಅಧಿಕಾರಿಗಳಿಂದ ಸಹಿಯನ್ನು ಪಡೆದುಕೊಳ್ಳುವುದು.ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಆದೇಶಗಳನ್ನು ಪಾಲಿಸದ ತಾಲ್ಲೂಕು, ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ ನಿಯಮದಂತೆ ಶಿಸ್ತುಕ್ರಮಕ್ಕೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಮಂಡ್ಯ ಜಿಲ್ಲಾ ಪಂಚಾಯತಿ ಸಿಇಓ ಅವರು ಹೊರಡಿಸಿರುವ ಆದೇಶವು ಕಟ್ಟುನಿಟ್ಟಾಗಿ ಪಾಲನೆ ಹಾಕುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಜಿಲ್ಲಾ ಪಂಚಾಯತಿ ಸಿಇಓ ನಂದಿನಿ ರವರು ಜಿಲ್ಲಾ ಪಂಚಾಯತಿಯ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಇಲಾಖೆಗಳಲ್ಲಿಯೂ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಚೇರಿಯಲ್ಲಿ ಹಾಜರಿರುವಂತೆ ಎಲ್ಲಾ ಇಲಾಖೆಗೂ ಆದೇಶಿಸುವಂತೆ ಜನರ ಧ್ವನಿ ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *

error: Content is protected !!