
ಮಂಡ್ಯ:ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒಗಳು ತಮ್ಮ ವ್ಯಾಪ್ತಿ ಗ್ರಾಮಗಳ ಗ್ರಾಮ ಠಾಣಾ ಆಸ್ತಿಗಳಿಗೆ 9 ಮತ್ತು 11
ಇ -ಸ್ವತ್ತುಗಳನ್ನು ನೀಡಲು ಕ್ರಮವಹಿಸಬೇಕು.ಸಣ್ಣ ಪುಟ್ಟ ತೊಂದರೆಗಳಿದ್ದರೆ ಅದನ್ನು ಸರಿಪಡಿಸಿ ಸಾರ್ವಜನಿಕರಿಗೆ ತುರ್ತಾಗಿ ಇ -ಸ್ವತ್ತು ವಿತರಿಸಬೇಕು. ಸಾರ್ವಜನಿಕರ ಕೆಲಸ ಮಾಡಲು ಆಗದ ಪಿಡಿಒಗಳು ತಮ್ಮ ಕುರ್ಚಿ ಬಿಟ್ಟು ಹೊರಡಿ ಬೇರೆ ಅಧಿಕಾರಿಗಳು ಬರುತ್ತಾರೆ ಎಂದು ಶಾಸಕ ಹಾಗೂ ಚೆಸ್ಕಾಂ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ
ಎಚ್ಚರಿಕೆ ನೀಡಿದರು.
ತಾಲೂಕಿನ ಕೊತ್ತತ್ತಿ ಎರಡನೇ ಹೋಬಳಿ ತಗ್ಗಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ನಾಡಕಚೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜನರನ್ನು ಸುತ್ತಾಡಿಸದೆ ಸಣ್ಣ ಪುಟ್ಟ ವ್ಯತ್ಯಾಸ ಸರಿಪಡಿಸಿಕೊಂಡು ಯುದ್ಧೋಪಾದಿಯಲ್ಲಿ ಯೋಜನೆ ಗಳನ್ನು ರೂಪಿಸಿಕೊಂಡು ಕಾರ್ಯತತ್ಪರರಾಗಿ ಕೆಲಸ ಮಾಡುವಂತೆ ಹೇಳಿದರು.
ತಗ್ಗಹಳ್ಳಿ ನಾಡಕಚೇರಿ ಕಟ್ಟಡಕ್ಕೆ ಸ್ಥಳ ದಾನ ಮಾಡಿದ ಲೇ. ಗುರುಮಲ್ಲಪ್ಪ ಕುಟುಂಬಕ್ಕೆ ಋಣಿಯಾಗಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ನಾನು ಎರಡನೇ ಬಾರಿ ಶಾಸಕರಾಗಿದ್ದ ಅವಧಿಯಲ್ಲಿ ನಾಡಕಚೇರಿ ಕಟ್ಟಡ ಕಟ್ಟಲು ಪ್ರಾರಂಭವಾದುದು ಈಗ ಇಲ್ಲಿಯೇ ಉಳಿಸುವ ಕೆಲಸ ಆಯಿತು ಎಂದು ಹೇಳಿದರು.
ರೈತರಿಗೆ ನಿರಂತರವಾಗಿ 7ಗಂಟೆ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತಿದ್ದೇವೆ.24 ಗಂಟೆಯ ಒಳಗೆ ಟಿಸಿ ಬದಲಾವಣೆಗೆ ಕ್ರಮವ ಹಿಸುತ್ತಿದ್ದೇವೆ ಎಂದು ಹೇಳಿದರು.
ಕಂದಾಯ ಇಲಾಖೆ ಹಾಗು ಪಂಚಾಯಿತಿ ಇಲಾಖೆ ಎಲ್ಲ ಇಲಾಖೆಗಳಿಗೂ ಮಾತೃ ಇಲಾಖೆಯಾಗಿವೆ ಎಂದರು.
ತಗ್ಗಹಳ್ಳಿ ಹಾಗೂ ಕೊತ್ತತ್ತಿ ವ್ಯಾಪ್ತಿಯಲ್ಲಿ ಹತ್ತು ಸಾವಿರ ಪೌತಿ ಖಾತೆಗಳಿವೆ ರೈತ ಬಾಂಧವರು ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಸರಿ ಮಾಡಿಕೊಂಡು ದೊಡ್ಡ ಮನಸ್ಸು ಮಾಡಿ ಮುಂದೆ ಬಂದು ಪೌತಿ ಖಾತೆಗಳನ್ನು ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಏಪ್ರಿಲ್ 25ರಂದು ಕೊತ್ತತ್ತಿ, ಮೇ 3 ರಂದು ಸೂನಗಹಳ್ಳಿ, ಮೇ 13 ರಂದು ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮವಿದ್ದು ಸಾರ್ವಜನಿಕರು ಜನಸ್ಪಂದನ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ನಾನು ಶಾಸಕನಾಗಿ ಮೇ 25ನೇ ತಾರೀಕಿಗೆ ಎರಡು ವರ್ಷಗಳು ತುಂಬುತ್ತಿದ್ದು ಜನ ಪರವಾಗಿ ಮುತುವರ್ಜಿ ವಹಿಸಲಿಲ್ಲ ಎಂದರೆ ಜನರು ನಮಗೆ ಶಾಪ ಹಾಕುತ್ತಾರೆ. ಈ ನಿಟ್ಟಿನಲ್ಲಿ ತಗ್ಗಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಯೋಜನೆಗಳನ್ನು ರೂಪಿಸಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಮಾತನಾಡಿ ಕಂದಾಯ ಇಲಾಖೆ ಎಲ್ಲಾ ಇಲಾಖೆಗೆ ಮಾತೃ ಇಲಾಖೆ ಆಗಿದ್ದು ಹೆಚ್ಚು ಜನರ ಕೆಲಸ ಹಾಗೂ ಬಹು ಸಂಪರ್ಕ ಇರುವ ಇಲಾಖೆಯಾಗಿದೆ ಎಂದು ಹೇಳಿದರು.
ಸಾರ್ವಜನಿಕರು ತಾಲೂಕು ಕಚೇರಿಗೆ ಕೆಲಸ ಕಾರ್ಯಗಳಿಗೆ ಬರುವುದನ್ನು ಕಡಿಮೆ ಮಾಡಲು ಹತ್ತರಿಂದ ಹದಿನೈದು ಗ್ರಾಮಗಳನ್ನು ಸೇರಿಸಿಕೊಂಡು ನಾಡಕಚೇರಿ ಕಟ್ಟಡ ನಿರ್ಮಾಣ ಮಾಡಿ 20 ರಿಂದ 30 ಸೇವೆಗಳನ್ನು ಸಾರ್ವಜನಿಕರಿಗೆ ಕೊಡಲು ಸರ್ಕಾರ ವ್ಯವಸ್ಥೆ ಮಾಡಿದೆ ಎಂದು ಹೇಳಿದರು.
18 ಲಕ್ಷ ರು ವೆಚ್ಚದ ಸರ್ಕಾರದ ಅನುದಾನದ ಜೊತೆ ದಾನಿಗಳ ಸಹಕಾರದಿಂದ ತಗ್ಗಹಳ್ಳಿ ಗ್ರಾಮದಲ್ಲಿ
ಉತ್ತಮವಾದ ನಾಡಕಚೇರಿ ನಿರ್ಮಾಣ ಆಗಿದೆ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಗ್ಗಹಳ್ಳಿ ನಾಡಕಚೇರಿಗೆ ನಿವೇಶನ ನೀಡಿದ ಲೇ.ಗುರುಮಲ್ಲಪ್ಪರವರ ಕುಟುಂಬಸ್ಥರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದರ, ತಗ್ಗಹಳ್ಳಿ ನಾಡಕಚೇರಿ ಉಪ ತಹಶೀಲ್ದಾರ್ ಡಿ.ತಮ್ಮಣ್ಣಗೌಡ, ನಿರ್ಮಿತಿ ಕೇಂದ್ರ ಯೋಜನಾ ವ್ಯವಸ್ಥಾಪಕ ಬಿ.ಜಯಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮುಖಂಡ ತಗ್ಗಹಳ್ಳಿ ಕೃಷ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ್, ಹಳುವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ, ಗ್ರಾಮ ಪಂಚಾಯತಿ ಸದಸ್ಯ ಅನಿಲ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

Leave a Reply