Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸಾದೊಳಲು ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯ : ಸರ್ಕಾರಿ ಶಾಲೆ ಪಕ್ಕವೇ ತೆರೆದ ಬೋರ್‌ವೆಲ್

ಮಂಡ್ಯ ಜಿಲ್ಲೆಯ  ಮದ್ದೂರು ತಾಲೂಕಿನ ಸಾದೊಳಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲೇ ಹಲವಾರು ತಿಂಗಳುಗಳಿಂದ ತೆರೆದ ಸ್ಥಿತಿಯಲ್ಲಿ ಬೋರ್‌ವೆಲ್ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು  ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಶಾಲೆಯ ಸಮೀಪದಲ್ಲಿರುವ ಈ ತೆರೆದ ಬೋರ್‌ವೆಲ್ ಯಾವುದೇ ರಕ್ಷಣಾ ವ್ಯವಸ್ಥೆಯಿಲ್ಲದೆ ಇರುವುದರಿಂದ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ. ಶಾಲಾ ಮಕ್ಕಳು ಆಟವಾಡುವ ವೇಳೆ ಅಥವಾ ಸಾರ್ವಜನಿಕರು ಗಮನಿಸದೇ ಹೋದರೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು  ತಿಳಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಈ ಬಗ್ಗೆ ಸಾದೊಳಲು ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದಿದ್ದರೂ ಇದುವರೆಗೆ  ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ತೆರೆದ ಬೋರ್‌ವೆಲ್‌ಗಳಿಂದ ಸಂಭವಿಸಿರುವ ದುರಂತಗಳ ಹಿನ್ನೆಲೆಯಲ್ಲಿ, ಇಂತಹ ನಿರ್ಲಕ್ಷ್ಯ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.

ಗ್ರಾಮಸ್ಥರು ಹಾಗೂ ಪೋಷಕರು ತಕ್ಷಣವೇ ತೆರೆದಿರುವ ಬೋರ್‌ವೆಲ್‌ನ್ನು ಮುಚ್ಚಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು  ಒತ್ತಾಯಿಸಿದ್ದಾರೆ.


ವರದಿ : ಎಂ.ಚಾಮರಾಜು

Leave a Reply

Your email address will not be published. Required fields are marked *

error: Content is protected !!