Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಬಾಳೇನಹಳ್ಳಿ ಮಹದೇಶ್ವರ ದೇವಾಲಯದ ಭೂಮಿ ಖಾಸಗಿ ವ್ಯಕ್ತಿಗೆ ಪರಭಾರೆ ಯತ್ನ ; ಗ್ರಾಮಸ್ಥರ ವಿರೋಧ

ಮಂಡ್ಯ ತಾಲ್ಲೂಕು ಬಸರಾಳು ಹೋಬಳಿ ಕಂಬದಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಗೆ ಬರುವ ಬಾಳೇನಹಳ್ಳಿಯಲ್ಲಿರುವ ಮಹದೇಶ್ವರ ದೇವಸ್ಥಾನದ ಭೂಮಿಯನ್ನು  ಖಾಸಗಿ ವ್ಯಕ್ತಿಯೊಬ್ಬರು ಕಬಳಿಸಲು ಯತ್ನಸಿದ ಆರೋಪ ಕೇಳಿ ಬಂದಿದೆ..

ಬಾಳೇನಹಳ್ಳಿಯಲ್ಲಿ ಪುರಾತನವಾದ ಮಹದೇಶ್ವರ ದೇವಸ್ಥಾನವಿದ್ದು, ಈ ದೇವಸ್ಥಾನದ ಹೆಸರಲ್ಲಿ ಸುಮಾರು 48ಎಕರೆ ಬೆಲೆಬಾಳುವ ಜಮೀನಿದೆ. ಸದರಿ ಜಮೀನಲ್ಲಿ ಪ್ರಸ್ತುತ ವಿವಿದ ರೀತಿಯ ಮರಗಳಿದ್ದು, ಈ ಮರಗಳನ್ನು ಸುತ್ತಮುತ್ತಲಿನ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಬೆಳೆಸಿದ್ದು, ತಲೆ ತಲೆಮಾರುಗಳಿಂದ ಇದು ಸರ್ಕಾರಿ ಗೋಮಾಳವಾಗಿದೆ‌.

ಇಲ್ಲಿ, ಮದುವೆ ಮತ್ತು ಇತರೆ ಶುಭ ಕಾರ್ಯಗಳು ಕೂಡ ನಡೆಯುತ್ತಿದ್ದು ಕಾರ್ತಿಕ ಮಾಸದಲ್ಲಿ ಒಂದು ವಾರ ಪೂರ್ತಿ ಬಾರೀ ದನಗಳ ಜಾತ್ರೆ ನಡೆಯುತ್ತದೆ. ಅಂಬರೀಶ್ ಶಾಸಕರಾಗಿದ್ದ ವೇಳೆ ಇಲ್ಲಿ ಸಮುದಾಯ ಭವನ ಸ್ಥಾಪಿಸಿದ್ದು ಇದು ಸ್ಥಳೀಯ ಜನರ ಧಾರ್ಮಿಕ ಕೇಂದ್ರವಾಗಿದೆ. ಇಂತ ಜಾಗವನ್ನು ಮಂಡ್ಯದ ಪ್ರಭಾವಿ ವ್ಯಕ್ತಿಯೊಬ್ಬರಿಗೆ ಪರಭಾರೆ ಮಾಡಲು ಸಂಬಂದಿತ ಮಂಡ್ಯ ತಾಲ್ಲೂಕು ಅಧಿಕಾರಿಗಳು ಹುನ್ನಾರ ನಡೆಸಿದ್ದು, ಸದರಿ ಜಮೀನನ್ನು ಪರಭಾರೆ ಮಾಡಿದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.‌‌‌.

ಮಹದೇಶ್ವರ ದೇವಸ್ಥಾನಕ್ಕೆ ಸೇರಿರುವ 48 ಎಕರೆ ಜಮೀನಿನಲ್ಲಿ 8 ಎಕರೆಯಷ್ಟು ಭೂಮಿಯನ್ನು ಮಂಡ್ಯದ ಖಾಸಗಿ ವ್ಯಕ್ತಿಯೊಬ್ಬರಿಗೆ ಪರಭಾರೆ ಮಾಡಲಾಗಿದ್ದು, ಈ ಸಂಬಂದ ಜಮೀನು ಸರ್ವೆಗೆ, ಸಂಬಂದಿತ ವ್ಯಕ್ತಿ ತಾಲ್ಲೂಕು ಅಧಿಕಾರಿಗಳ ಜತೆ ಸ್ಥಳಕ್ಜೆ ಬಂದಿದ್ದರು. ವಿಷಯ ತಿಳಿದ ಸುತ್ತಮುತ್ತಲ 30 ಹಳ್ಳಿಯ ಗ್ರಾಮಸ್ತರು ಈ ನಡಾವಳಿಯನ್ನು ಪ್ರತಿಭಟಿಸಿ ಅಧಿಕಾರಿಗಳನ್ನು ವಾಪಸ್ ಕಳುಹಿದ್ದರು..

ಈ ಸಂಬಂಧ ಮಹದೇಶ್ವರ ದೇವಸ್ಥಾನದ ಹತ್ತಿರ ಸಭೆ ಸೇರಿದ 30 ಹಳ್ಳಿಯ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ಭೂಮಿಯನ್ನು ಪರಭಾರೆ ಮಾಡಲು ಬಿಡುವುದಿಲ್ಲ, ಈ ವಿಚಾರವಾಗಿ ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಲೋಕಸಭಾ ಸದಸ್ಯರು ಗಮನ ಹರಿಸಬೇಕು, ಈ ವಿಷಯವಾಗಿ ಅದಿಕಾರಿಗಳಿಗೆ ತಾಕೀತು ಮಾಡಿ ದೇವಸ್ಥಾನದ ಜಮೀನನ್ನು ಯಾವುದೇ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡದಂತೆ ಕ್ರಮ ವಹಿಸಲು ಸೂಚಿಸಬೇಕೆಂದು ಜನ ಪ್ರತಿನಿಧಿಗಳಿಗೆ ಆಗ್ರಹಿದ್ದಾರೆ..

ಮೂವತ್ತು ಹಳ್ಳಿಯ ಭಕ್ತರ ಭಾವನೆಗಳಿಗೆ ದಕ್ಕೆ ತರುವಂತ ನಡಾವಳಿಗಳು ಜರುಗಿದರೆ, ಜನಪ್ರತಿನಿದಿಗಳೂ ಸೇರಿದಂತೆ ಅಧಿಕಾರಿಗಳೂ ಕೂಡ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ..

Leave a Reply

Your email address will not be published. Required fields are marked *

error: Content is protected !!