
ಮಂಡ್ಯ : ಹನ್ನೆಡನೇ ಶತಮಾನದಲ್ಲಿ ಸಮಸಮಾಜ ನಿರ್ಮಾಣದ ಸಾಮಾಜಿಕ ಕ್ರಾಂತಿಯನ್ನು ನಡೆಸಿದ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಒಂದು ಜಾತಿಗೆ ಸೀಮಿತವಾಗಿರಿಸದೆ ಜಾತ್ಯಾತೀತವಾಗಿ ಆಚರಣೆ ಮಾಡಬೇಕೆಂದು ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜು ನಾಥ್ ಬೆಟ್ಟಹಳ್ಳಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು, ಜಗಜ್ಯೋತಿ ಬಸವಣ್ಣನವರು 900 ವರ್ಷಗಳ ಹಿಂದೆ ಜಾತಿವ್ಯವಸ್ಥೆ ಹಾಗೂ ಮೌಢ್ಯಾಚರಣೆಯ ವಿರುದ್ಧ ಸಾಮಾಜಿಕ ಕ್ರಾಂತಿಯನ್ನು ನಡೆಸಿದ ಮಹಾಮಾನವತಾವಾದಿ. ಸರ್ಕಾರ ಬಸವಪ್ರಜ್ಞೆ ನಾಡಿನಾದ್ಯಂತ ಹರಡಬೇಕೆಂದು ಅನುಭವಮಂಪಟ ರಥಯಾತ್ರೆಯನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಜಾತಿ, ವರ್ಣ, ವರ್ಗರಹಿತವಾಗಿ ಪ್ರತಿಯೊಬ್ಬರೂ ಬಸವಣ್ಣನವರ ಆದರ್ಶಗಳನ್ನು ಪಾಲಿಸಬೇಕೆಂದು ಸರ್ಕಾರವೇ ವಿಶೇಷವಾಗಿ ಈ ಬಾರಿಯ ಬಸವಜಯಂತಿಯನ್ನು ಆರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ. ಆದರೆ, ಜಿಲ್ಲಾಡಳಿತ ಬಸವಣ್ಣನವರನ್ನು ಕೇವಲ ಒಂದು ಜಾತಿಗೆ ಸಮೀಕರಿಸಿ ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡಿಸಿರುವುದು ಖಂಡನೀಯವಾಗಿದ್ದು,
ಜಿಲ್ಲಾಧಿಕಾರಿಗಳು ಜಾತ್ಯಾತೀತವಾಗಿ ಬಸವಣ್ಣವರ ಅನುಯಾಯಿಗಳು ಹಾಗೂ ಎಲ್ಲಾ ಸಮುದಾಯದ ಸಂಘಟನೆಗಳ ಮುಖಂಡರ ಸಭೆಯನ್ನು ಕರೆದು ಆಹ್ವಾನ ಪತ್ರಿಕೆಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳ ಹೆಸರನ್ನು ಹಾಕಿಸಬೇಕೆಂದು ಅವರು ಒತ್ತಾಯಿಸಿದರು.
ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಕಬೇಕೆಂದು ಆದೇಶ ನೀಡಿದ್ದರೂ ಸಹ ಪೊಲೀಸ್, ಆರೋಗ್ಯ, ಶಿಕ್ಷಣ, ಪಂಚಾಯಿತಿ ಸೇರಿದಂತೆ ಮಂಡ್ಯ ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರಗಳು ಇರುವುದಿಲ್ಲ.
ಆದೇಶ ಹೊರಬಂದು ಎರಡು ವರ್ಷಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯವಾಗಿದೆ.
ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣ, ನಗರಸಭೆ, ಪುರಸಭೆಯ ಸಭಾಂಗಣಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು.
ಈ ಬಾರಿಯ ಬಸವಜಯಂತಿಯನ್ನು ಕಡ್ಡಾಯವಾಗಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರವನ್ನಿಟ್ಟು ಆಚರಣೆ ಮಾಡುವ ಬಗ್ಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳಿಗೆ ತಾವು ಸೂಕ್ತ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಜಗಜ್ಯೋತಿ ಬಸವಣ್ಣನವರ ಪುತ್ಥಳಿಯನ್ನು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸ್ಥಾಪಿಸಬೇಕೆಂಬ ಬಹುದಿನಗಳ ಬೇಡಿಕೆ ಇದುವರೆಗೂ ಬೇಡಿಕೆಯಾಗಿಯೇ ಉಳಿದಿದೆ. ಈ ಬಗ್ಗೆ ಉನ್ನತಮಟ್ಟದ ಸಭೆ ನಡೆಸಿ ಅನುಮತಿ ಪಡೆದು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

Leave a Reply