Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸಭೆಗೆ ಬಾರದ ಗ್ರಾ. ಪಂ. ಸದಸ್ಯರು ; ಅವಿಶ್ವಾಸ ನಿರ್ಣಯಕ್ಕೆ ಸೋಲು

ಮಂಡ್ಯ ತಾಲೂಕಿನ ಬೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ದ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯಕ್ಕೆ ಯಾವುದೇ ಸದಸ್ಯರು ಸಭೆಗೆ ಹಾಜರಾಗಿ ಬೆಂಬಲ ನೀಡದ ಕಾರಣ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ.
ಬೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್. ಸುವರ್ಣಾವತಿ ಅವರ ವಿರುದ್ಧ ಸದಸ್ಯರು ಕಳೆದ ಜ.20ರಂದು ಅವಿಶ್ವಾಸ ನಿರ್ಣಯದ ಗೊತ್ತುವಳಿ ಮಂಡಿಸುವಂತೆ ಉಪ ವಿಭಾಗಾಧಿಕಾರಿಗೆ ಬೇಲೂರು ಗ್ರಾಮ ಪಂಚಾಯತಿ ಸದಸ್ಯರು ಮನವಿ ಸಲ್ಲಿಸಿದ್ದರು. ಸದಸ್ಯರ ಮನವಿ ಮೇರೆಗೆ ಉಪ ವಿಭಾಗಾಧಿಕಾರಿ ಶಿವಮೂರ್ತಿ ಅವರು ಜ. 30 ರಂದು ಗ್ರಾ.ಪಂ.ನ ಎಲ್ಲ 24 ಮಂದಿ ಸದಸ್ಯರಿಗೆ ನೋಟೀಸ್ ನೀಡಿ ಫೆ. 15 ರಂದು ಅವಿಶ್ವಾಸ ನಿರ್ಣಯ ಮಂಡನಾ ಸಭೆಗೆ ಹಾಜರಾಗುವಂತೆ ಸೂಚಿಸಿದ್ದರು.
ಈ ಮಧ್ಯೆ ಗ್ರಾ.ಪಂ. ಅಧ್ಯಕ್ಷೆ ಎಸ್. ಸುವರ್ಣಾವತಿ ಅವರು ಫೆ. 4 ರಂದು ತಮ್ಮ ಅಧ್ಯಕ್ಷ ಸ್ಥಾನಕ್ಕೆ  ರಾಜೀನಾಮೆ ಸಲ್ಲಿಸಿದ್ದರು. ಮತ್ತೆ ಫೆ.13 ರಂದು ರಾಜೀನಾಮೆಯನ್ನು ವಾಪಸ್ಸು ಪಡೆದಿದ್ದರು.
ಇಂದು ಉಪ ವಿಭಾಗಾಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ  ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ಸಭೆ ಏರ್ಪಡಿಸಲಾಗಿತ್ತು. ಆದರೆ ಗ್ರಾಮ ಪಂಚಾಯಿತಿಯ ಎಲ್ಲಾ 24 ಸದಸ್ಯರೂ ಸಭೆಗೆ ಗೈರು ಹಾಜರಾದ ಕಾರಣ ಉಪವಿಭಾಗಾಧಿಕಾರಿ ನಿಗಧಿತ ಅವಧಿಯವರೆಗೆ ಸಭೆಯಲ್ಲೇ ಕಾದು ಕುಳಿತಿದ್ದರು. ಆದರೂ ಯಾವುದೇ ಸದಸ್ಯರು ಸಭೆಗೆ ಬಾರದ ಕಾರಣ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಸೋಲುಂಟಾಗಿದೆ ಎಂದು ಘೋಷಿಸಿದರು.

Leave a Reply

Your email address will not be published. Required fields are marked *

error: Content is protected !!