Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಚಂದಗಾಲು ಗ್ರಾಮದಲ್ಲಿ ಶಾಸಕ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 1300 ಕೋಟಿ ರು. ವೆಚ್ಚದ ಕಾಮಗಾರಿಗೆ ಮುಖ್ಯಮಂತ್ರಿ
ಸಿದ್ದರಾಮಯ್ಯನವರು ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ
ಪಿ.ರವಿಕುಮಾರ್ ಹೇಳಿದರು.
ತಾಲೂಕಿನ ಚಂದಗಾಲು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಜನಸಂಪರ್ಕ ಸಭೆ ಉದ್ಘಾಟಿಸಿ
ಮಾತನಾಡಿ, ಇದುವರೆಗೂ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ 1200
ಕೋಟಿ ರು. ಹಣ ತಂದಿದ್ದೇನೆ. ಇನ್ನೂ 1300 ಕೋಟಿ ರು. ಕಾಮಗಾರಿಗೆ ಹಣಕಾಸಿನ ಮಂಜೂರಾತಿ
ದೊರಕಿದ್ದು, ಮುಖ್ಯಮಂತ್ರಿಗಳಿಂದ ದಿನಾಂಕ ನಿಗದಿಪಡಿಸಿಕೊಂಡು ಚಾಲನೆ ನೀಡುವುದಾಗಿ
ತಿಳಿಸಿದರು.
ಚಂದಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಕೋಟಿ ರು. ಕೆಲಸ ನಡೆದಿದೆ. ದೊಡ್ಡ
ಕೊತ್ತಗೆರೆ ರಸ್ತೆಗೆ 20 ಲಕ್ಷ ರು. ಚಿಕ್ಕಕೊತ್ತಗೆರೆಗೆ 15 ಲಕ್ಷ ರು.
ಮಾಚೇನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿಗೆ 65ಲಕ್ಷ ರು. ನೀಡಿ ಕೆಲಸ
ಪ್ರಗತಿಯಲ್ಲಿದೆ. ಚಲ್ಲನಾಯಕನಹಳ್ಳಿ ಸಮುದಾಯ ಭವನಕ್ಕೆ ೨೫ ಲಕ್ಷ ರು., ೨೦ ಕೋಟಿ
ರು. ವೆಚ್ಚದಲ್ಲಿ ಗದ್ದೆ ಬಯಲಿನ ರಸ್ತೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿದರು.
ಕಾವೇರಿ ನೀರಾವರಿ ನಿಗಮದಿಂದ 300 ಕೋಟಿ ರು. ಮಂಜೂರಾಗಿದ್ದು, ಕ್ಷೇತ್ರ
ವ್ಯಾಪ್ತಿಯಲ್ಲಿ 120 ಕೋಟಿ ರು.ಗೆ ಕಾಮಗಾರಿ ನಡೆಯುತ್ತಿದೆ. ಇನ್ನು ಶ್ರೀರಂಗಪಟ್ಟಣದ
ಬಳಿಯ ಕಾವೇರಿ ನದಿಯಿಂದ ಬಸರಾಳು, ದೇವಲಾಪುರ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ  ಒಂದು
ಸಾವಿರ ಕೋಟಿ ರು. ವೆಚ್ಚದಲ್ಲಿ ನೀರನ್ನು ಹರಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು
ಭರವಸೆ ನೀಡಿದರು.
ನಿಮ್ಮ ಶಾಸಕ ನಿಮ್ಮ ಊರಿಗೆ ಎಂಬ ಹೆಸರಿನಲ್ಲಿ ಅಧಿಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ
ಕರೆತರುತ್ತಿದ್ದೇನೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ಶಾಸಕರಿಗೆ 50 ಕೋಟಿ ರೂ.ಗಳನ್ನು
ನೀಡಿದ್ದಾರೆ. ಕೆರಗೋಡು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಾಲಯ ಅಭಿವೃದ್ಧಿಗೆ 3 ಕೋಟಿ
ರು., ಶ್ರೀ ಮಹದೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸಗಾವಿ, ಚಂದಗಾಲು
ಗ್ರಾಮಸ್ಥರ ಸಭೆ ಕರೆದು ಚರ್ಚಿಸಿ ನೀಲಿನಕ್ಷೆ ತಯಾರು ಮಾಡಲಾಗುವುದು ಎಂದರು.

ನ್ಯಾಯಾಲಯದಲ್ಲಿರುವ ವ್ಯಾಜ್ಯಗಳನ್ನು ಹೊರತುಪಡಿಸಿ ಉಳಿದ ಸಮಸ್ಯೆಗಳಿದ್ದರೆ
ಅಧಿಕಾರಿಗಳೆದುರು ಇಟ್ಟು ಪರಿಹಾರ ಕಂಡುಕೊಳ್ಳಬಹುದು. ಇಲ್ಲೇ ಪರಿಹಾರವಾಗುವ
ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಲಾಗುವುದು. ಇಲ್ಲದಿದ್ದರೆ ತಿಂಗಳೊಳಗೆ
ಸಮಸ್ಯೆಯನ್ನು ಪರಿಹರಿಸಿಕೊಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್
ವಿಶ್ವನಾಥ್, ತಾಪಂ ಇಓ ಲೋಕೇಶ್‌ಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು,
ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ, ಸದಸ್ಯರಾದ ಸುನೀತಾ, ಶ್ರೀನಿವಾಸಚಾರಿ, ಓದುಲಿಂಗೇಗೌಡ,
ಚಿಕ್ಕಲಿಂಗಮ್ಮ, ಕೃಷ್ಣೇಗೌಡ, ಭೈರೇಶ್, ಕಾಂಗ್ರೆಸ್ ಮುಖಂಡ ಜಿ.ಸ್ವಾಮಿ, ದ್ಯಾಪಸಂದ್ರ
ಗ್ರಾಪಂ ಮಾಜಿ ಅಧ್ಯಕ್ಷ ಉಮೇಶ್, ರಾಜಶ್ವ ನಿರೀಕ್ಷಕ ಧನಂಜಯ, ಪಿಡಿಒ ಅಶ್ವಿನಿ ಇತರರಿದ್ದರು

Leave a Reply

Your email address will not be published. Required fields are marked *

error: Content is protected !!