
ಮಂಡ್ಯದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಮೂರು ವರ್ಷದ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಎಸ್‌ಐಗಳನ್ನು ಅಮಾನತು ಮಾಡಲಾಗಿದೆ.ಮಗು ಸಾವಿಗೆ ಮಂಡ್ಯ ಟ್ರಾಫಿಕ್ ಪೊಲೀಸರು ಕಾರಣವೆಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಲ್ಕೆಟ್ ತಪಾಸಣೆ ಮಾಡುತ್ತಿದ್ದ ಮೂವರು ಎಎಸ್‌ಐಗಳನ್ನು ಅಮಾನತು ಮಾಡಿದ್ದಾರೆ.
ಎಎಸ್ಐಗಳಾದ ಜಯರಾಮ್, ನಾಗರಾಜ್, ಗುರುದೇವ್ ಅಮಾನತುಗೊಂಡವರಾಗಿದ್ದಾರೆ.
ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಅಶೋಕ್ ಮತ್ತು ವಾಣಿಯವರು ಮಗಳು ಹೃತೀಕ್ಷಗೆ ನಾಯಿ ಕಚ್ಚಿದ್ದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದುಕೊಂಡು ಮಂಡ್ಯಕ್ಕೆ ಬರುತ್ತಿದ್ದ ವೇಳೆ ಮಂಡ್ಯ ನಗರದ ಸ್ವರ್ಣ ಸಂದ್ರ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆಗಾಗಿ ಏಕಾಏಕಿ ಹಠಾತ್ ಅಡ್ಡಗಟ್ಟಿದ ಪರಿಣಾಮ, ಅಶೋಕ್ ಚಾಲನೆ ಮಾಡುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದಿನಿಂದ ಬಂದ ಟೆಂಪೋ ಮಗು ಹೃತೀಕ್ ಮೇಲೆ ಹರಿದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿತು. ಇದರಿಂದ ಸಿಡಿದೆದ್ದ ಕುಟುಂಬಸ್ಥರು ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶಗೊಂಡು ಹೆದ್ದಾರಿಯಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಪಾಸಣೆ ಸ್ಥಳದಲ್ಲಿ ಇದ್ದ ಮೂವರು ಎಎಸ್ಐಗಳನ್ನು ಸಸ್ಪೆಂಡ್ ಮಾಡಿದ್ದಾರೆ.

Leave a Reply