Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಬಾಲ ಕಾರ್ಮಿಕರ ಪದ್ಧತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾರ್ವಜನಿಕರ ಸಹಕರ ಅಗತ್ಯ: ಡಾ.ಕುಮಾರ

ಮಂಡ್ಯ.ಜೂ.12(ಕರ್ನಾಟಕವಾರ್ತೆ):- ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಹೆಣ್ಣು ಭ್ರೂಣ ಹತ್ಯೆಗಳಂತಹ ಪ್ರಕರಣಗಳನ್ನು ಕೇವಲ ಸರ್ಕಾರ ಪತ್ತೆ ಹಚ್ಚಿದರೆ ಸಾಲದು, ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಿದಾಗ ಮಾತ್ರ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಅವರು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ,ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ (ರಿ), ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ-2025 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಕಳಂಕವಾಗಿದೆ ಇದು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕಾದ ಪ್ರಮುಖ ವಿಷಯ. ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದು ಎಂದರು.

ಸಾರ್ವಜನಿಕರು ಪ್ರಜ್ಞಾವಂತರಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದರೆ ಇಂತಹ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಬಹುದಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯಲ್ಲಿ 6-14 ವರ್ಷದ ಮಕ್ಕಳಿಗೆ ಉಚಿತ ಕಡ್ಡಾಯ ಎಂದು ಕಾನೂನು ಇದ್ದರೂ ಸಹ ಆಧುನಿಕ ಯುಗದಲ್ಲೂ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಮಕ್ಕಳಿಗೆ ಸರಿಯಾದ ಶಿಕ್ಷಣ ಹಾಗೂ ನೌತಿಕ ಮೌಲ್ಯಗಳನ್ನು ತಿಳಿಸದೆ ಇದ್ದರೆ ಮಕ್ಕಳ ಸಮಾಜಕ್ಕೆ ಮಾರಕರಾಗುತ್ತರೆ. ದುಡಿಯಲು ಹೋದ ಬಾಲಕಾರ್ಮಿಕರು ಕೆಲಸದ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆಗಳ ದಾರಿ ಹಿಡಿಯುವ ಸಾಧ್ಯತೆ ಹೆಚ್ಚು ಇರುತ್ತದೆ. ಬಾಲ ಕಾರ್ಮಿಕರನ್ನು ರಕ್ಷಿಸಲು ಅನೇಕ ಕಾಯ್ದೆಗಳಿವೆ. ಕಾಯ್ದೆಗಳಿಗಿಂತ ಮುಖ್ಯವಾದದ್ದು ಮಾನವೀಯತೆ ಮತ್ತು ಹೃದಯವಂತಿಕೆ, ಸಮಾಜದಲ್ಲಿ ನಡೆಯುತ್ತಿರುವ ತಪ್ಪುಗಳನ್ನು ಸಾಮಾಜಿಕ ಕಳಕಳಿ ಹಾಗೂ ಹೊಣೆಗಾರಿಕೆಯಿಂದ ಪ್ರಶ್ನೆ ಮಾಡಬೇಕು ಎಂದು ತಿಳಿ ಹೇಳಿದರು.

ಶಾಲೆಯ ವಿದ್ಯಾರ್ಥಿಗಳು ನಿಮ್ಮ ಪಕ್ಕದಲ್ಲಿ ಕುಳಿತುಕೊಳ್ಳುವ ಸ್ನೇಹಿತರು ದೀರ್ಘಕಾಲ ರಜೆಯಲ್ಲಿದ್ದರೆ ನಿಮ್ಮ ಶಾಲೆಯ ಮುಖ್ಯ ಶಿಕ್ಷಕರ ಗಮನಕ್ಕೆ ತನ್ನಿ. ದೀರ್ಘಾವಧಿ ಕಾಲ ರಜೆ ಹೊಂದಿರುವ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಶಾಲೆಯ ಮುಖ್ಯಸ್ಥರ ಜವಾಬ್ದಾರಿಯಾಗಿದೆ. ಒಂದು ಊರಿನಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಕುರಿತು ಸುತ್ತಮುತ್ತಲಿನವರಿಗೆ ತಿಳಿದಿರುತ್ತದೆ, ಇಂತಹ ಪ್ರಕರಣಗಳನ್ನು ತಡೆಯುವುದು ಆ ಊರಿನ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಜವಾಬ್ದಾರಿ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಆನಂದ್ ಎಂ ಅವರು ಮಾತನಾಡಿ 2002 ರಿಂದ ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಇದರ ಪ್ರಮುಖ ಉದ್ದೇಶ 14 ವರ್ಷಗಳ ಒಳಗಿನ ಮಕ್ಕಳನ್ನು ದುಡಿಯಲು ಕಾರ್ಖಾನೆ, ಹೋಟೆಲ್ ಹಾಗೂ ಇನ್ನಿತರೆ ಸ್ಥಳಗಳಿಗೆ ಕಳಿಸದಿರಲಿ ಎಂದು, 14 ವರ್ಷದೊಳಗಿನ ಮಕ್ಕಳು ಕೆಲಸ ಮಾಡುವುದು ಕಾನೂನು ಬಾಹಿರ ಎಂದು ಹೇಳಿದರು.

ಬಾಲ ಕಾರ್ಮಿಕ ಪದ್ಧತಿಯನ್ನು ತಡೆಯಲು ಮೊದಲು ನಮಗೆ ಅದರ ಪರಿಣಾಮಗಳ ಕುರಿತಾಗಿ ಅರಿವಿರಬೇಕು ಹಾಗೂ ಬಾಲಕಾರ್ಮಿಕ ಪದ್ಧತಿಯ ಕುರಿತು ಜಾಗೃತಿ ಮೂಡಿಸಬೇಕು. ಪೋಷಕರು ಬಡತನದ ನೆಪ ಹೇಳಿ ಮಕ್ಕಳನ್ನು ದುಡಿಯಲು ಕಳುಹಿಸಬೇಡಿ ಅವರಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಶಿಕ್ಷಣ ನೀಡಿದರೆ ಮುಂದಿನ ದಿನಗಳಲ್ಲಿ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಮಕ್ಕಳ ಸಮಿತಿಯ ಅಧ್ಯಕ್ಷೆ ಸುಮಿತ್ರ ಅವರು ಮಾತನಾಡಿ ಸಮಾಜದಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳನ್ನು ರದ್ದುಗೊಳಿಸಬೇಕೆಂದರೆ ಸಾರ್ವಜನಿಕರು ಪ್ರಶ್ನಿಸುವುದನ್ನು ಕಲಿಯಬೇಕು. ಮಕ್ಕಳು ತಮ್ಮ ರಕ್ಷಣೆಗೆ ಇರುವ ಸಹಾಯವಾಣಿಗಳಾದ 1098 ಅಥವಾ 112 ಕರೆ ಮಾಡಬಹುದು. ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ ಈ ಸಹಾಯವಾಣಿಗಳಿಗೆ ಕರೆ ಮಾಡಿ ತಿಳಿಸಬೇಕು ಎಂದು ಕಿವಿ ಮಾತು ಹೇಳಿದರು.

ನಂತರ “ವಿಶ್ವ ಬಾಲ ಕಾರ್ಮಿಕರು ಪದ್ಧತಿ ವಿರೋಧ ದಿನ”ದ ಅಂಗವಾಗಿ ಆಯೋಜಿಸಲಾಗಿದ್ದ
ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಚಿತ್ರಕಲೆ ಸ್ಪರ್ಧೆಯಲ್ಲಿ ಸೇಂಟ್ ಜೋಸೆಫರ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀ ಲಕ್ಷ್ಮೀ ಪ್ರಥಮ ಸ್ಥಾನ, ಕರ್ನಾಟಕ ಪಬ್ಲಿಕ್ ಶಾಲೆಯ ಶಶಾಂಕ್ ದ್ವಿತೀಯ ಸ್ಥಾನ ಹಾಗೂ ಕಾರ್ಮೆಲ್ ಪ್ರೌಢಶಾಲೆಯ ಮೋಕ್ಷ ಎಂ.ಎಸ್ ತೃತೀಯ ಸ್ಥಾನ ಪಡೆದುಕೊಂಡರು.

ಪ್ರಬAಧ ಸ್ಪರ್ಧೆಯಲ್ಲಿ ಯಲಿಯೂರಿನ ಆಂಜನೇಯ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕ ಎಂ ಪ್ರಥಮ ಸ್ಥಾನ, ಸೇಂಟ್ ಜೋಸೆಫರ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿ ಶರ್ಮಿಳ.ಎಸ್ ದ್ವಿತೀಯ ಸ್ಥಾನ, ರೋಟರಿ ಪ್ರೌಢಶಾಲೆಯ ದೀಕ್ಷಿತ್ ಎಂ ತೃತೀಯ ಸ್ಥಾನ ಪಡೆದುಕೊಂಡರು.

ನಂತರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಮೇಗೌಡ ಅವರು ವಿಶ್ವ ಬಾಲಕಾರ್ಮಿಕ ವಿರೋಧಿ ದಿನ-2025 ರ ಪ್ರಮಾಣವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಟಿ ರಾಜೇಂದ್ರ, ನಗರಸಭೆ ಪೌರಾಯುಕ್ತೆ ಪಂಪಶ್ರೀ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ.ಎಸ್, ಪಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎಚ್.ಟಿ ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಾಲಕಾರ್ಮಿಕ ಪದ್ಧತಿ ವಿರೋಧ ಜಾಗೃತಿ ಜಾಥಾ

ಜಿಲ್ಲಾಧಿಕಾರಿಗಳ ಕಚೇರಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದವರೆಗೂ ಶಾಲಾ ಮಕ್ಕಳು “ಬಾಲ ಕಾರ್ಮಿಕತೆ ನಾಚಿಕೆಗೇಡು ಬಾಲಕಾರ್ಮಿಕ ಪದ್ಧತಿ ನಿಲ್ಲಿಸಿ”. “ದುಡಿಮೆ ಬೇಡ ಶಿಕ್ಷಣ ಬೇಕು”. “ಮುಗ್ಧತೆ ರಕ್ಷಿಸಿ ಬಾಲಕಾರ್ಮಿಕತೆ ಶಿಕ್ಷಿಸಿ” ಎಂಬ ನಾಮಫಲಕಗಳನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಜಾಥಾ ನಡೆಸಲಾಯಿತು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜಿ.ಎನ್ ರವರು ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಜಾಥಾಗೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!