
ದೇಶದ ಕಾನೂನಿನ್ವಯ ನೀತಿ, ನಿಯಮ ಅನುಸರವಾಗಿ 14 ವರ್ಷದೊಳಗಿನ ಬಾಲಕರ, ಬಾಲಕಿಯರನ್ನು ಕೆಲಸಕ್ಕೆ ಹಚ್ಚುವುದು ಕಾನೂನು ಬಾಹಿರವಾಗಿದ್ದು, ಪೋಷಕರು ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ ಕಡ್ಡಾಯವಾಗಿ ಶಿಕ್ಷಣ ಒದಗಿಸಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸುಬ್ರಮಣ್ಯ, ಜೆ.ಎನ್ ಅವರು ತಿಳಿಸಿದರು.
ಅವರು ಇಂದು ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಂಡ್ಯ ವತಿಯಿಂದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮತ್ತು ಅರಿವು ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿರುವ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ವರ್ಷಗಳಿಂದ ಕಾನೂನು ಅಧಿಕಾರಿಗಳು, ಇಲಾಖೆಗಳು ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟಲು ಅನೇಕ ಪ್ರಯತ್ನಗಳನ್ನು ಕೈಗೊಂಡಿದ್ದರು ಸಹ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯವಾಗುತ್ತಿಲ್ಲ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಸಾರ್ವಜನಿಕರು ಇಲಾಖೆಗಳೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಅನಕ್ಷರತೆ, ಬಡತನದ ಕಾರಣದಿಂದಾಗಿ ಮಕ್ಕಳನ್ನು ಕೆಲಸಕ್ಕೆ ಹಚ್ಚುವುದನ್ನು ನಿರ್ಮೂಲನೆ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಪೋಷಕರು ಹಾಗೂ ಸಮಾಜ ಸಾಕ್ಷಿಯಾಗಬೇಕು ಎಂದು ಹೇಳಿದರು.
ಬಾಲ ಕಾರ್ಮಿಕ ಪದ್ಧತಿಯ ದುಷ್ಪಾರಿಣಾಮಗಳನ್ನು ತಿಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕುರಿತು ಬೀದಿ ನಾಟಕ ನಡೆಸಲಾಗುತ್ತಿದ್ದು, ಬೀದಿ ನಾಟಕದ ಆಶಯ ಅರಿಯುವಲ್ಲಿ ಹಾಗೂ ಯಶಸ್ವಿಯಾಗುವಲ್ಲಿ ಸಾರ್ವಜನಿಕರು ಸಹಕರಿಸಿ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಆನಂದ್ ಅವರು ಮಾತನಾಡಿ ಬಾಲ ಕಾರ್ಮಿಕ ಪದ್ಧತಿ ನಿಷೇದವಾಗಿದ್ದರು ಸಹ ಗ್ಯಾರೇಜ್, ಹೋಟೆಲ್, ಕಾರ್ಖಾನೆ ಮತ್ತು ಅನೇಕ ಸ್ಥಳಗಳಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಕೆಲಸ ನೀಡುತ್ತಿರುವುದು ನಿಜಕ್ಕೂ ವಿಪರ್ಯಾಸ. ಈ ನಿಟ್ಟಿನಲ್ಲಿ ಬಾಲ ಕಾರ್ಮಿಕ ಪದ್ಧತಿ ನಿಷೇದದ ಬಗ್ಗೆ ಅರಿವು ಮೂಡಿಸಲು ಮಂಡ್ಯ ಜಿಲ್ಲೆಯ 7 ತಾಲ್ಲೂಕುಗಳಲ್ಲಿ 7 ದಿನಗಳ ಕಾಲ ಬಾಲ ಕಾರ್ಮಿಕ ಪದ್ಧತಿ ದುಷ್ಪಾರಿಣಾಮ ಕುರಿತು ಬೀದಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸರ್ವಜನಿಕರು ನಾಟಕ ಯಶಸ್ವಿಗೊಳ್ಳಲು ಸಹಕರಿಸಿ ಎಂದರು.
ಇದೇ ಸಂದರ್ಭದಲ್ಲಿ ನ್ಯಾಯಾಧೀಶ ಸಂದೀಪ್,ಕಾರ್ಮಿಕ ಅಧಿಕಾರಿ ಸವಿತಾ, ಕಾರ್ಮಿಕ ನಿರೀಕ್ಷಕರುಗಳಾದ ಗಂಗಾಧರ್, ಸ್ವಾಮಿ ಮತ್ತು ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply