
ಜೀವನದ ಮೌಲ್ಯ, ಸಂಸ್ಕೃತಿ, ಸಂಸ್ಕಾರ ಅರಿಯಲು ಮತ್ತು ಉತ್ತಮ ಜೀವನ ಶೈಲಿ ಅಳವಡಿಸಿಕೊಂಡು ಬದುಕಲು ಯುವ ಪೀಳಿಗೆಗಳಿಗೆ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿ ಅವರು ಅಭಿಪ್ರಾಯಪಟ್ಟರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಜಿಲ್ಲೆಯ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಎಲ್ಲಾ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸರ್. ಎಂ ವಿಶ್ವೇಶ್ವರಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯ ನಾಗರಿಕರಿಗಾಗಿ ಜಿಲ್ಲಾಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ನಾವು ತಾಂತ್ರಿಕ ಯುಗದಲ್ಲಿ ಬದುಕುತ್ತಿದ್ದೇವೆ. ಮೊಬೈಲ್ ನಲ್ಲಿ ಜ್ಞಾನಕ್ಕೆ ಅಗತ್ಯವಾದ ಮಾಹಿತಿಗಳನ್ನು ಶೀಘ್ರದಲ್ಲೇ ಪಡೆಯಬಹುದು. ಆದರೆ, ಬದುಕಿಗೆ ಅಗತ್ಯವಾದ ಜೀವನದ ಮೌಲ್ಯಗಳನ್ನು ಹಿರಿಯರಿಂದ ಮಾತ್ರ ತಿಳಿಯಲು ಸಾಧ್ಯ. ಜೀವನದ ಪ್ರತಿ ಘಟ್ಟದಲ್ಲಿ ಜೀವಿಸಿರುವ ಹಿರಿಯ ನಾಗರೀಕರ ಅನುಭವ ಮಹತ್ವವಾದದ್ದು, ಆದ್ದರಿಂದ ಯುವ ಪೀಳಿಗೆಗಳಿಗೆ ಬದುಕಿನ ಮೌಲ್ಯಗಳನ್ನು ತಿಳಿಸುವಲ್ಲಿ ಮಹತ್ತರ ಪಾತ್ರ ನಿಭಾಯಿಸಿ ಎಂದು ಹಿರಿಯರಲ್ಲಿ ಮನವಿ ಮಾಡಿದರು.
ವಯಸ್ಸು ಎಂಬುವುದು ದೇಹಕ್ಕೆ ಆಗುವಂತಹದ್ದು, ಸದಾ ಚೈತನ್ಯದಿಂದ ಉತ್ಸಾಹದಲ್ಲಿ ಬದುಕುವವರಿಗೆ ವಯಸ್ಸು ಎನ್ನುವಂತಹದು ಕೇವಲ ಸಂಖ್ಯೆ ಅಷ್ಟೇ ಆಗಿರುತ್ತದೆ. ದೇಹದ ಜತೆಗೆ ಮನಸ್ಸಿಗೂ ವ್ಯಾಯಾಮದ ಅವಶ್ಯಕತೆಯಿದ್ದು, ಮನಸ್ಸು ಮತ್ತು ದೇಹವನ್ನು ಚಲನಶೀಲವಾಗಿರಿಸಿಕೊಂಡು ಉತ್ಸಾಹದಿಂದ ಬದುಕು ನಡೆಸಬೇಕು ಎಂದು ತಿಳಿ ಹೇಳಿದರು.
ಬದುಕಿನ ಉದ್ದಕ್ಕೂ ಕುಟುಂಬಕ್ಕಾಗಿ ಜೀವಿಸಿ 60ರ ನಂತರದ ನಿವೃತ್ತಿ ಬದುಕನ್ನು ನಿಮಗಾಗಿ ಬದುಕಿ, ಯಾರಲ್ಲಿಯೂ ಯಾವುದೇ ನಿರೀಕ್ಷೆಯಿಲ್ಲದೆ ಆತ್ಮ ಗೌರವದಿಂದ ಜೀವನ ನಡೆಸುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ಹಿರಿಯ ನಾಗರಿಕರನ್ನು ಉದ್ದೇಶಿಸಿ ಸ್ಫೂರ್ತಿದಾಯಕವಾದ ಮಾತುಗಳನ್ನು ಹೇಳಿದರು.
ಹಿರಿಯರಲ್ಲಿರುವಂತಹ ಶಕ್ತಿ, ಚೈತನ್ಯ, ಉತ್ಸಾಹ ಮತ್ತು ಜೀವನದ ಮೌಲ್ಯ ಅನೇಕರಿಗೆ ಪ್ರೇರಣೆ ನೀಡುವಂತಹದ್ದು, ಸಮಾಜದಲ್ಲಿ ಪ್ರತಿಯೊಬ್ಬರೂ ಹಿರಿಯರನ್ನು ಗೌರವಿಸುವುದು ಮತ್ತು ಅವರ ಹಿತ ವಚನಗಳನ್ನು ಪಾಲಿಸುವುದನ್ನು ಕಲಿಯಬೇಕು ಎಂದು ಸಮಾಜಕ್ಕೆ ಕರೆ ನೀಡುದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮುಕ್ತರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ.ಜಿ ,ಜಿಲ್ಲಾ ಹಿರಿಯ ನಾಗರೀಕರ ಇಲಾಖೆಯ ಕೋಮಲ್ ಕುಮಾರ್,ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ
ಕೆ.ಬಿ.ಶಿವಲಿಂಗಯ್ಯ, ಜಿಲ್ಲಾ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಿಕ್ಕಹುಚ್ಚಯ್ಯ ಹಾಗೂ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ರಂಗೇಗೌಡ ಉಪಸ್ಥಿತರಿದ್ದರು.
ಹಿರಿಯ ನಾಗರಿಕರಿಗಾಗಿ ಜಿಲ್ಲಾ ಮಟ್ಟದಲ್ಲಿ ಮ್ಯೂಸಿಕಲ್ ಚೇರ್, ಬಿರುಸಿನ ನಡಿಗೆ, ಬಕೆಟ್ಟಿಗೆ ಚೆಂಡು ಹಾಕುವುದು ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗೀತಾ ಗಾಯನ, ಏಕ ಪಾತ್ರ ಅಭಿನಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Leave a Reply