Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ನೀರಿನ ಘಟಕಕ್ಕೆ ಅಕ್ರಮ ವಿದ್ಯುತ್ ಸಂಪರ್ಕ: ಲೋಕಾಯುಕ್ತಕ್ಕೆ ದೂರು

ಮಂಡ್ಯ: ಕುಡಿಯುವ ನೀರಿನ ಯೂನಿಟ್‌ಗೆ ನೇರ ವಿದ್ಯುತ್ ಸಂಪರ್ಕ (ಅಕ್ರಮ) ಅಳವಡಿಸಿದ್ದು ಪತ್ತೆಯಾಗಿ, ಸೆಸ್ಕ್ ವಿಧಿಸಿದ ದಂಡ ಹಣವನ್ನು ಗ್ರಾಪಂ ಅನುದಾನದಲ್ಲಿ ಪಾವತಿಸಿ, ಅಧಿಕಾರ ದುರುಪಯೋಗ ಹಾಗೂ ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡಿರುವ ಹಳೇಬೂದನೂರು ಗ್ರಾಪಂ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸವಿತಾ ಎಂಬುವವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಪಂ ಹಿಂದಿನ ಅಧ್ಯಕ್ಷೆ ಅರುಣ (ಹಾಲಿ ಸದಸ್ಯೆ), ಉಪಾಧ್ಯಕ್ಷೆ ಮಾನಸ (ಹಾಲಿ ಅಧ್ಯಕ್ಷೆ)  ಹಾಗೂ ಹಿಂದಿನ ಪಿಡಿಒ ವೈ.ಎಸ್.ವಿನಯ್‌ಕುಮಾರ್ (ಸದ್ಯ ಕೆರಗೋಡು ಗ್ರಾಪಂ  ಪಿಡಿಒ) ಅವರು ಕುಡಿಯುವ ನೀರಿನ ಸ್ಥಾವರಕ್ಕೆ ನೇರ ಸಂಪರ್ಕ (ಅಕ್ರಮ) ಪಡೆದಿರುವುದನ್ನು ಪತ್ತೆ ಹಚ್ಚಿದ ಸೆಸ್ಕ್ಕ್ ಜಾಗೃತ ದಳ ₹ 1,27,354 ರೂ. ದಂಡ ವಿಧಿಸಿದೆ. ತಮ್ಮ ಬೇಜವಾಬ್ದಾರಿ, ಕರ್ತವ್ಯಲೋಪ ಮುಚ್ಚಿಕೊಳ್ಳುವ ಭಾಗವಾಗಿ ತಮ್ಮ ವಿರುದ್ದದ ಪ್ರಕರಣ ಮುಕ್ತಾಯ ಮಾಡಿಕೊಳ್ಳುವ ಭಾಗವಾಗಿ 26-05-2023ರಂದು ಸೆಸ್ಕ್ ಕೆರಗೋಡು ಉಪ ವಿಭಾಗದ ಶಾಖೆಗೆ ಕ್ರಮವಾಗಿ  1,03,353 ಹಾಗೂ 24,೦೦೦ ರೂ.ಗಳನ್ನು ೧೫ನೇ ಹಣಕಾಸು ಯೋಜನೆಯ ಅನುದಾನವನ್ನು  2 ಬಿಲ್ಲುಗಳಲ್ಲಿ ಪಾವತಿ ಮಾಡಲಾಗಿದೆ. ಇದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಉಲ್ಲಂಘನೆಯಾಗಿದೆ.

ಸದರಿ 15ನೇ ಹಣಕಾಸು ಯೋಜನೆಯ ಅನುದಾನ ಬಳಕೆಗೆ ಗ್ರಾಮಸಭೆ, ಬಳಿಕ ಸಾಮಾನ್ಯ ಸಭೆಯ ಅನುಮೋದನೆಯಾಗಬೇಕು. ಅ ಬಳಿಕ ಹಣ ವಿನಿಯೋಗ ನಡೆಯುತ್ತದೆ. ಅದು ವಿದ್ಯುತ್ ಬಿಲ್ ಕ್ರಮಬದ್ದವಾಗಿದ್ದರೆ, ಅನುಮೋದನೆ ಸಿಗುತ್ತದೆ. ದಂಡ ಪಾವತಿಗೆ ಅನುದಾನ ಬಳಸಲು ಕಾನೂನು ರೀತ್ಯಾ ಅವಕಾಶವಿಲ್ಲ.

ಇವರಲ್ಲಿ ಪಿಡಿಒ ಸರ್ಕಾರಿ ನೌಕರನಾಗಿ ತಾನು ಮಾಡಿರುವ ಕರ್ತವ್ಯ ಲೋಪ ಮನದಟ್ಟು ಮಾಡಿ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ವಹಿಸಬೇಕಿತ್ತು. ಆದರೆ ಅಧ್ಯಕ್ಷೆ, ಉಪಾಧ್ಯಕ್ಷೆಗೆ ಮಾತ್ರ ವಿಚಾರ ತಿಳಿಸಿ ಅನುದಾನ ದುರ್ಬಳಕೆ ಮಾಡಿರುವುದು ಸ್ಪಷ್ಟವಾಗಿದೆ.
ಅಲ್ಲದೆ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ವಿದ್ಯುತ್ ಮೀಟರ್ ಅಳವಡಿಸಿಲ್ಲದ ದಂಡ ಪಾವತಿ ಮಾಡಿದ ಬಿಲ್‌ಗೆ ಅಕ್ರಮ ಮರೆ ಮಾಚಲು ವಿದ್ಯುತ್ ಮೀಟರ್ ಸಂಖ್ಯೆಯನ್ನು ಅಕ್ರಮ, ಕಾನೂನುಬಾಹಿರವಾಗಿ ನಮೂದಿಸಿ ಲೆಕ್ಕಪರಿಶೋಧಕರಿಗೆ ತಾವು ಮಾಡಿರುವ ಭ್ರಷ್ಟಾಚಾರ ಸಿಗದಂತೆ ಮಾಡಿ ಮತ್ತೊಂದು ಗಂಭೀರ ಅಪರಾಧ ಎಸಗಿದ್ದಾರೆ.
ಆದ್ದರಿಂದ ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥ ಮೂವರ ವಿರುದ್ದ ಕ್ರಮ ವಹಿಸಬೇಕೆಂದು ಸವಿತಾ ಅವರು ಲೋಕಾಯುಕ್ತರಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!