Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಗ್ರಂಥಪಾಲಕರು ಜ್ಞಾನ ಸಾಗರದ ನಾವಿಕರಂತೆ ಕಾರ್ಯನಿರ್ವಹಿಸಿ : ಸಿಇಓ ನಂದಿನಿ

ಗ್ರಂಥಾಲಯಗಳು ಜ್ಞಾನ ಸಾಗರವಾದರೆ, ಗ್ರಂಥಪಾಲಕರು ಜ್ಞಾನ ಸಾಗರದ ನಾವಿಕರಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓ ನಂದಿನಿ ಕೆ.ಆರ್. ಅವರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಕಿವಿಮಾತು ಹೇಳಿದರು.

ಬುಧವಾರ ಮಂಡ್ಯ ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ ಗ್ರಂಥಪಾಲಕರ ದಿನಾಚರಣೆ ಹಾಗೂ ಗ್ರಾಮ ಪಂಚಾಯತ್ ಗ್ರಂಥಾಲಯಗಳ ಮೇಲ್ವಿಚಾರಕರ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಂಥಾಲಯಗಳನ್ನು ಸ್ಥಾಪನೆ ಮಾಡುವುದರಷ್ಟೇ ಮುಖ್ಯವಾದುದು ಗ್ರಂಥಾಲಯಗಳನ್ನು ನಿರ್ವಹಣೆ ಮಾಡುವುದಾಗಿರುತ್ತದೆ, ಈ ನಿಟ್ಟಿನಲ್ಲಿ ಗ್ರಂಥಾಲಯ ಮೇಲ್ವಿಚಾರಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಗ್ರಂಥಾಲಯ ಮೇಲ್ವಿಚಾರಕರಿಗೆ ಮಾಸಿಕ ವೇತನ ಮತ್ತು ಇತರ ಭತ್ಯೆಗಳನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಲು ಕ್ರಮವಹಿಸಲಾಗುತ್ತಿದೆ. ಹೊಸ ಗ್ರಂಥಾಲಯಗಳನ್ನು ಸ್ಥಾಪಿಸಿ ಅವುಗಳಿಗೆ ಅಗತ್ಯ ಪೀಠೋಪಕರಣಗಳನ್ನು ಒದಗಿಸಲಾಗಿದೆ. ಗ್ರಂಥಾಲಯಗಳಿಗೆ ಅಗತ್ಯವಿರುವ ಪುಸ್ತಕಗಳನ್ನು ನೀಡಲಾಗಿದ್ದು, ಗ್ರಂಥಾಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಗ್ರಂಥಪಾಲಕರ ದಿನಾಚರಣೆ

ಭಾರತದ ಗ್ರಂಥಾಲಯ ಚಳುವಳಿಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ರವರ ಜನ್ಮದಿನದ ಅಂಗವಾಗಿ ಆಗಸ್ಟ್ 12 ರಂದು ಗ್ರಂಥಪಾಲಕರ ದಿನಾಚರಣೆ ಆಚರಿಸಲು ಉದ್ದೇಶಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಜಿಲ್ಲೆಯ ಕೆಲವು ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ಇದ್ದ ಕಾರಣ ಇಂದು ಗ್ರಂಥಪಾಲಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್. ತಿಳಿಸಿದರು.

ಪ್ರತೀ ಮಾಹೆ ವಿನೂತನ ಚಟುವಟಿಕೆಗಳ ಆಯೋಜನೆ

ಎಲ್ಲಾ ಗ್ರಂಥಪಾಲಕರು ಈ ಹಿಂದೆ ನಡೆದ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಅದರಂತೆ ಪ್ರತೀ ಮಾಹೆ ವಿನೂತನ ಚಟುವಟಿಕೆಗಳನ್ನು ಆಯೋಜಿಸಿ ಅನುಷ್ಟಾನಗೊಳಿಸುವಂತೆ ಸೂಚಿಸಿದರು.

ಸೆಪ್ಟಂಬರ್-2025ರ ಮಾಹೆಯಲ್ಲಿ ಮಾದಕ ಮುಕ್ತ ಕರ್ನಾಟಕ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಈ ಅಭಿಯಾನದಲ್ಲಿ ಗ್ರಂಥಪಾಲಕರು ಗ್ರಾಮ ಪಂಚಾಯತ್ ಗಳಿಗೆ ಸಹಕರಿಸಿ ಅಭಿಯಾನವನ್ನು ಯಶಸ್ವಿಗೊಳಿಸಲು ಸೂಚಿಸಿದರು.
ನಿರುದ್ಯೋಗಿ ಯುವಕ ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳ್ಳಲು ಹಾಗೂ ವಿದ್ಯಾರ್ಥಿಗಳು ತಮ್ಮ ವಿದ್ಯಾಬ್ಯಾಸಕ್ಕೆ ಅನುಕೂಲ ಆಗುವಂತೆ ಗ್ರಂಥಾಲಯಗಳು ಕಾರ್ಯನಿರ್ವಹಿಸಬೇಕು, ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಬಹುದಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಉತ್ತಮ ಗ್ರಂಥಪಾಲಕರಿಗೆ ಅಭಿನಂದನಾ ಪತ್ರ ವಿತರಣೆ: ಬೇಸಿಗೆ ಶೀಬಿರ ಆಯೋಜನೆ ಮತ್ತು ಗ್ರಂಥಾಲಯಗಳಲ್ಲಿ ವಿವಿಧ ವಿನೂತನ ಕಾರ್ಯಕ್ರಮಗಳ ಆಯೋಜನೆ ಆಧಾರದಲ್ಲಿ ಪ್ರತ ತಾಲ್ಲೂಕಿನ 3 ಗ್ರಂಥಪಾಲಕರಿಗೆ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಮಿ ಪಿ, ಸಹಾಯಕ ಕಾರ್ಯದರ್ಶಿಗಳಾದ ಚಂದ್ರು, ರವೀಂದ್ರ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುಷ್ಮಾ, ವೀಣಾ, ಶ್ರೀನಿವಾಸ್, ಲೋಕೇಶ್ ಮೂರ್ತಿ, ವೇಣು ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!