Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಹುಲ್ಲುಕೆರೆ ಕೊಪ್ಪಲು ಡೈರಿ ಅಧ್ಯಕ್ಷರ ಆಯ್ಕೆ ವಿಚಾರ ; ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನ

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆ ಪ್ರಶ್ನಿಸಿ ನಡೆಯುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಹುಲ್ಲುಕೆರೆ ಕೊಪ್ಪಲು ಗ್ರಾಮದಲ್ಲಿ ಸೋಮುವಾರ ನಡೆದಿದೆ.
ಗ್ರಾಮದ ದೇವರಾಜು ಅವರ ಪತ್ನಿ ಮಂಜುಳಾ (48) ಎಂಬಾಕೆಯೇ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆಯಾಗಿದ್ದಾರೆ.
ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಮೊದಲ 15 ತಿಂಗಳಿಗೆ ಶೃತಿ ಅವರನ್ನು ಅಧ್ಯಕ್ಷರನ್ನಾಗಿ ಒಪ್ಪಂದದ ಮೇರೆಗೆ ಆಯ್ಕೆ ಮಾಡಲಾಗಿತ್ತು. ಅದರಂತೆ ಅವರ ಅವಽ ಮುಗಿದ ಬಳಿಕ ರಾಜೀನಾಮೆ ನೀಡಿದ್ದರು. ನಂತರ ಅಧ್ಯಕ್ಷರಾಗಿ ವೀಣಾ ಅವರನ್ನು ಆಯ್ಕೆ ಮಾಡಬೇಕಿತ್ತು. ಆದರೆ ಇವರನ್ನು ಬಿಟ್ಟು ಬೇರೆಯವರು ಅಧ್ಯಕ್ಷರನ್ನಾಗಿ ಕೆಲವರು ಮಾಡಿಕೊಂಡರು. ಇದನ್ನು ಪ್ರಶ್ನಿಸಿ ಐವರು ನಿರ್ದೇಶಕರು ರಾಜೀನಾಮೆ ನೀಡಿದ್ದರು.

ಬಳಿಕ ಅಧ್ಯಕ್ಷರಾಗಿದ್ದವರು ರಾಜೀನಾಮೆ ನೀಡಿದ್ದ ಓರ್ವ ನಿರ್ದೇಶಕರನ್ನು ತಮ್ಮ ಪರ ಸೆಳೆದುಕೊಂಡು ಬಲವಂತವಾಗಿ ರಾಜೀನಾಮೆ ಕೊಡಿಸಿದ್ದಾರೆಂಬಂತೆ ಹೇಳಿಕೆ ಕೊಡಿಸಿದ್ದರು ಎನ್ನಲಾಗಿದೆ. ಈ ವಿವಾದದ ಹಿನ್ನೆಲೆಯಲ್ಲಿ ಸಭೆ ನಡೆಸಲು ಅವಕಾಶ ನೀಡಿರಲಿಲ್ಲ. ಇಂದು ಏಕಾಏಕಿ ಸಭೆ ನಡೆಸಲು ಮುಂದಾದರು.

ಇದರಿಂದ ಅಸಮಾಧಾನಗೊಂಡ ಇತರೆನಿರ್ದೇಶಕರು ಇತರೆ ಸದಸ್ಯರ ಜೊತೆಗೂಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾನೂನು ಪ್ರಕಾರ ಸಭೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಂಜುಳಾ ಅವರು ಅಸಮಾಧಾನಗೊಂಡು ವಿಷ ಸೇವಿಸಿ ಅಸ್ವಸ್ಥರಾದರು. ತಕ್ಷಣ ಅವರನ್ನು ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಜಿಲ್ಲಾ ಸಶಸ್ತ್ರ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!