Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಅಪಸ್ಮಾರ ಕುರಿತ ಜಾಗೃತಿ ಜಾಥಕ್ಕೆ ಡಿಎಚ್ಓ ಡಾ. ಮೋಹನ್ ಚಾಲನೆ

ಅಪಸ್ಮಾರ ಅಥವಾ ಮೂರ್ಛೆ ರೋಗ ಮೆದುಳಿನ ನರವೈಜ್ಞಾನಿಕ ಕಾಯಿಲೆಯಾಗಿದೆ ಎಂದು ಜಿಲ್ಲಾ ಅಸಾಂಕ್ರಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಸೋಮಶೇಖರ್ ಹೇಳಿದರು.
ನಗರದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಿಮ್ಸ್, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಮಂಡ್ಯ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಅಪಸ್ಮಾರ(ಮೂರ್ಛೆ)ರೋಗ ದಿನಾಚರಣೆಯ ಜಿಲ್ಲಾ ಮಟ್ಟದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಜಗತ್ತಿನಲ್ಲಿ ಬರೋಬ್ಬರಿ ೫೦ ಮಿಲಿಯನ್ ಜನರು ಈ ಮೂರ್ಛೆ ರೋಗವನ್ನು ಹೊಂದಿದ್ದಾರೆ. ಆದರೆ ಹೆಚ್ಚಿನವರು ಈ ರೋಗವನ್ನು ಶಾಪವೆಂದು ನಂಬುತ್ತಾರೆ. ಈ ನಿಟ್ಟಿನಲ್ಲಿ ಈ ರೋಗದ ಬಗ್ಗೆ ಇರುವ ಜನರ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು, ಜಾಗೃತಿ, ಅರಿವು ಮೂಡಿಸುತ್ತಿದ್ದೇವೆ ಎಂದು ನುಡಿದರು.
ಮೂರ್ಛೆ ರೋಗ ಹಾಗೂ ಅದರ ಚಿಕಿತ್ಸಾ ವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಅಪಸ್ಮಾರ ರೋಗಿಗಳಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಅವರಿಗೆ ಧೈರ್ಯವನ್ನು ತುಂಬಲು ಪ್ರತಿವರ್ಷ ಫೆಬ್ರವರಿ ತಿಂಗಳ 2ನೇ ಸೋಮವಾರದಂದು ಅಂತರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನವನ್ನು  ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಭಾರತದಲ್ಲಿ 1ಕೋಟಿಗೂ ಹೆಚ್ಚು ಜನರು ಅಪಸ್ಮಾರದಿಂದ ಬಳಲುತ್ತಿದ್ದಾರೆ, ಇದು ಜನಸಂಖ್ಯೆಯ ಸುಮಾರು 1% ಕ್ಕಿಂತ ಹೆಚ್ಚಾಗಿದೆ, ವೆಬಿನಾರ್‌ಗಳು, ಜಾಗೃತಿ ಅಭಿಯಾನಗಳು, ಕಥೆಗಳನ್ನು ಹಂಚಿಕೊಳ್ಳುವುದು ಮತ್ತು ಮಾರ್ಗದರ್ಶನ ನೀಡುದುವು ದೈರ್ಯ ಹೇಳುವುದು ಬಹಳ ಮುಖ್ಯ ಎಂದರು.
ಈ ದಿನವು ಕೇವಲ ರೋಗದ ಬಗ್ಗೆ ತಿಳಿಸುವುದಲ್ಲದೆ, ಈ ಸ್ಥಿತಿಯೊಂದಿಗೆ ಬದುಕುತ್ತಿರುವ ಜನರಿಗೆ ಒಳಗೊಳ್ಳುವಿಕೆ ಮತ್ತು ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮೂರ್ಛೆರೋಗ ಪ್ರತಿಜ್ಞೆ, ಕಥೆಗಳನ್ನು ಕಾರ್ಯರೂಪಕ್ಕೆ ತರುವುದು ಎಂಬ ಘೋಷವಾಕ್ಯದೊಂದಿಗೆ ಹೊರಟ ಜಾಗೃತಿ ಜಾಥಕ್ಕೆ ಡಿಎಚ್‌ಓ ಡಾ. ಮೋಹನ್ ಚಾಲನೆ ನೀಡಿದರು. ಜಾಗೃತಿ ಜಾಥವು ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿ ಆವರಣದಿಂದ ಹೊರಟು ನಗರದ ಹೆದ್ದಾರಿಯ ಮೂಲಕ ಸಂಜಯ ವೃತ್ತದವರಗೆ ಸಾಗಿ, ಮಾನವಸರಪಳಿ ನಿರ್ಮಿಸಿ ಸಮಾಪ್ತಿಗೊಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ, ಡಾ.ಬೆಟ್ಟಸ್ವಾಮಿ, ತರಬೇತಿಕೇಂದ್ರ ಪ್ರಾಂಶುಪಾಲೆ ಡಾ.ಮಮತಾ, ಮೇಲ್ವಿಚಾರಕರಾದ ಚಿಕ್ಕ ಅರಸೇಗೌಡ, ಕಭಿ, ಉಪೇಂದ್ರ, ಮಹಮದ್ ಸುಹೇಲ್, ಮಂಗಳಮ್ಮ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!