
ಮಂಡ್ಯ ತಾಲೂಕಿನ ಇಂಡುವಾಳು ಅಂಗನವಾಡಿ ಕಟ್ಟಡ ನಿರ್ಮಾಣಗೊಂಡು ಆರು ತಿಂಗಳಾದರೂ ಇದುವರೆಗೂ ವಿದ್ಯುತ್ ಸಂಪರ್ಕವಿಲ್ಲ, ನೀರಿನ ವ್ಯವಸ್ಥೆ ಇಲ್ಲ. ಆದರೂ ಅಂಗನವಾಡಿ ಉದ್ಘಾಟನೆಗೊಂಡು ಕಾರ್ಯಾರಂಭ ಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 275ರ ಪರಿಹಾರ ಬಾಬ್ತ್ 22.02 ಲಕ್ಷ ರು. ವೆಚ್ಚದಲ್ಲಿ ಕೆಆರ್‌ಐಡಿಎಲ್ ಮೂಲಕ ಕಟ್ಟಡವನ್ನು ನಿರ್ಮಿಸಲಾಗಿದೆ. ಕಟ್ಟಡದ ಆವರಣದಲ್ಲಿ ದಲ್ಲೇ ನೀರಿನ ಸಂಪನ್ನೂ ನಿರ್ಮಿಸಿ,ನಳ ಸಂಪರ್ಕವನ್ನೂ ಒದಗಿಸಿದೆ. ಆದರೆ, ಮೋಟಾರ್ ನ್ನು ಇದುವರೆಗೂ ಅಳವಡಿಸಿಲ್ಲ. ಅದೇ ರೀತಿ ಕಟ್ಟಡಕ್ಕೆ ವಿದ್ಯುತ್ ವೈರ್‌ಎಳೆದು ಸ್ವಿಚ್ ಬೋರ್ಡ್, ಬಲ್ಪ್ ಹಾಕುವುದಕ್ಕೆ ಹೋಲ್ಡರ್‌ಗಳನ್ನೆಲ್ಲಾ ಅಳವಡಿಸಲಾಗಿದೆ. ಆದರೆ, ಸಂಪರ್ಕವನ್ನೇ ಕಲ್ಪಿಸಿಲ್ಲ. ಅಂಗನ ವಾಡಿಯಲ್ಲಿ ಫ್ಯಾನ್ ಅಳವಡಿಸಿಲ್ಲ, ಮಕ್ಕಳ ಕಲಿಕೆಗೊಂದು ಬೋರ್ಡ್‌ನ್ನೂ ಅಳವಡಿಸದೆ ಹಾಗೆಯೇ ಬಿಡಲಾಗಿದೆ.
ಕೆಆರ್‌ಐಡಿಎಲ್ ಅಧಿಕಾರಿಗಳು ಅಂಗನವಾಡಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸದೆ ಅವ್ಯವಸ್ಥಿತ ಕಟ್ಟಡ ವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿ ಕೈ ತೊಳೆದುಕೊಂಡಿದ್ದಾರೆ . ಹಸ್ತಾಂತರ ಮಾಡಿಕೊಂಡ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಕೂಡ ಯಥಾಸ್ಥಿತಿಯಲ್ಲೇ ಕಟ್ಟಡವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇಲ್ಲಿಯವರೆಗೆ ಅಧಿಕಾರಿಗಳು ಯಾರೂ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲವೇ, ಅಲ್ಲಿನ ವ್ಯವಸ್ಥೆಗಳು, ಮಕ್ಕಳು ಅನುಭವಿಸುತ್ತಿರುವ ಸಂಕಷ್ಟ ಗಳನ್ನು ಅರಿಯುವ ಕನಿಷ್ಠ ಕಾಳಜಿಯನ್ನೂ ಅಧಿಕಾರಿಗಳು ಪ್ರದರ್ಶಿಸದಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಗ್ರಾಮ ಪಂಚಾಯ್ತಿಯವರು ನೀಡಿರುವ ನಳ ಸಂಪರ್ಕದಿಂದ ಸಂಪಿಗೆ ನೀರು ಬರುತ್ತದೆ. ಸಂಪಿನಿಂದ ನೀರನ್ನು ಮೇಲೆತ್ತುವುದಕ್ಕೆ ಮೋಟಾರ್ ಅಳವಡಿಸಿಲ್ಲ, ವಿದ್ಯುತ್ ಸಂಪರ್ಕಕಲ್ಪಿಸಿಲ್ಲ. ಮಕ್ಕಳು ಶೌಚ ಮಾಡಿದಾಗ ಅದನ್ನು ಸ್ವಚ್ಛಗೊಳಿಸಲು ಸಂಪಿನೊಳಗಿನಿಂದ ಬಿಂದಿಗೆಯಲ್ಲಿ ನೀರನ್ನು ಮೇಲೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇದೆ . ಅಲ್ಲದೇ ಮಕ್ಕಳು ತಿಂದುಂಡ ತಟ್ಟೆ, ಅಡುಗೆ ಪಾತ್ರೆ ಗಳನ್ನು ಸ್ವಚ್ಛಗೊಳಿಸಲು ಕಷ್ಟವಾಗುತ್ತಿದೆ. ಜೊತೆಗೆ ಅಂಗನವಾಡಿಯೊಳಗೆ ಫ್ಯಾನ್ ವ್ಯವಸ್ಥೆ ಇಲ್ಲ. ಬಿಸಿಲ ತಾಪದಿಂದ ಉರಿವ ಧಗೆಯನ್ನು ಮಕ್ಕಳು ಸಹಿಸಿಕೊಂಡು ಕೂರುವಂತಾಗಿದೆ. ಮಕ್ಕಳಿಗೆ ಪಾಠ ಹೇಳಿಕೊಡುವುದಕ್ಕೆ ಅಂಗನವಾಡಿ ಶಿಕ್ಷಕರಿದ್ದರೂ,ಬರೆಯುವುದಕ್ಕೆ ಬೋರ್ಡೆನ್ನೇ ಅಳವಡಿಸಿಲ್ಲ .. ಹೀಗಿರುವಾಗ ಮಕ್ಕಳಿಗೆ ಅಂಗನವಾಡಿಯಲ್ಲಿ ಏನನ್ನು ಕಲಿಸಲು ಸಾಧ್ಯ ಎಂಬ ಪ್ರಶ್ನೆ ಮೂಡಿದೆ.
ನೀರಿಗಾಗಿ ಸಂಪನ್ನು ನಿರ್ಮಿಸಿ, ನೀರು ಸರಬರಾಜಿಗೆ ಪೈಪ್‌ಗಳನ್ನು ಅಳವಡಿಸಿದ ಮೇಲೆ ಅದಕ್ಕೊಂದು ಮೋಟಾರ್ ಅಳವಡಿಸಬೇಕು, ವಿದ್ಯುತ್ ಕೇಬಲ್‌ಗಳನ್ನು ಕಟ್ಟಡಕ್ಕೆ ಅಳವಡಿಸಿದ ಮೇಲೆ ಕೇಬಲ್ ಅಳವಡಿಸಬೇಕೆಂಬ ಸಾಮಾನ್ಯ ಪ್ರಜ್ಞೆ ಕೆಆರ್‌ಐಡಿಎಲ್ ಅಧಿಕಾರಿಗಳಿಗಿಲ್ಲ. ಅತಂತ್ರ ಸ್ಥಿತಿಯ ಕಟ್ಟಡವನ್ನು ಹಸ್ತಾಂತರ ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಧಿಕಾರಿಗಳಿಂದ ಏನೂ ಅರಿಯದ ಮುಗ್ಧ ಮಕ್ಕಳು ಸಂಕಷ್ಟ ಎದುರಿಸುವಂತಾಗಿದೆ.
ಕಟ್ಟಡವನ್ನು ಕಟ್ಟಿಸಿ ಅಲಂಕಾರಿಕವಾಗಿ ಬಣ್ಣ ಬಳೆದು, ಹೊರ ಮತ್ತು ಒಳಭಾಗದಲ್ಲಿ ಚಿತ್ರಗಳನ್ನು ಮೂಡಿಸಲಾಗಿದೆ. ಮೇಲೆಲ್ಲಾ ಹೊಳಪು, ಒಳಗೆಲ್ಲಾ ಹುಳುಕು ಎಂಬ ಮಾತಿನಂತೆ ಮೇಲ್ನೋಟಕ್ಕೆ ಕಟ್ಟಡ ಸುಂದರವಾಗಿರುವಂತೆ ಕಂಡರೂ ಒಳಗೆ ಕಾಣದ ಹುಳುಕುಗಳೇ ಹೆಚ್ಚಾಗಿವೆ. ಈ ರೀತಿಯ ಅವ್ಯವಸ್ಥೆಗೆ ಕಾರಣವಾಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಸಿಇಓ ನಂದಿನಿ ಅವರು ಕ್ರಮ ಕೈಗೊಳ್ಳಬೇಕು ಎಂದು ಜನರ ಧ್ವನಿ ಆಗ್ರಹಿಸುತ್ತದೆ

Leave a Reply