
ಸರ್ಕಾರಿ ಯೋಜನೆಗಳ ಸವಲತ್ತನ್ನು ಕಾರ್ಮಿಕರು ಪರಿಣಾಮಕಾರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಹೇಳಿದರು.
ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಚಿಕ್ಕ ಮಂಡ್ಯದಲ್ಲಿ ನಿರ್ಮಿಸಲಾಗಿರುವ ನೂತನ ಕಾರ್ಮಿಕ ಭವನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ನಮ್ಮ ಸರ್ಕಾರ ಕಾರ್ಮಿಕರು, ರೈತರು ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮವಹಿಸುತ್ತದೆ ಎಂದು ಭರವಸೆ ನೀಡಿದರು.
ಕಾರ್ಮಿಕ ಮುಖಂಡರು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕರಿಗೆ ಸರ್ಕಾರ ನೀಡುವ ಯೋಜನೆಗಳ ಕುರಿತು ಮನೆ ಮನೆಗೆ ಮಾಹಿತಿ ನೀಡುವ ಕಾರ್ಯಕೈಗೊಳ್ಳಿ, ಆಗ ಸರ್ಕಾರಿ ಯೋಜನೆಗಳು ಅವರನ್ನು ತಲುಪುತ್ತದೆ ಹಾಗೂ ಆರ್ಥಿಕ ಅಭಿವೃದ್ಧಿ ಹೊಂದುತ್ತಾರೆ ಎಂದು ತಿಳಿಸಿದರು.
ಕಾರ್ಮಿಕ ಭವನದ ಮೂಲ ಉದ್ದೇಶ ಕಾರ್ಮಿಕರಿಗೆ ಅಗತ್ಯ ಮಾಹಿತಿ ಒದಗಿಸುವುದು, ನವಭಾರತ ನಿರ್ಮಾಣಕ್ಕೆ ಕಾರ್ಮಿಕರ ಕೊಡುಗೆ ಅಪಾರ ಆದ್ದರಿಂದ ಕಾರ್ಮಿಕರು ಕಾರ್ಮಿಕ ಭವನ ಸದುಪಯೋಗವನ್ನು ಪರಿಣಾಮಕಾರಿಯಾಗಿ ಪಡೆದುಕೊಳ್ಳಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಖಾಸಗಿ ವಾಹನ ಚಾಲಕರು ಮೃತ ಪಟ್ಟ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ನೀಡುವ 5 ಲಕ್ಷ ರೂ ಪರಿಹಾರದ ಚೆಕ್ ಹಾಗೂ ವಿದ್ಯಾರ್ಥಿ ವೇತನ ಚೆಕ್ ನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಜಿಲ್ಲಾಧಿಕಾರಿಗಳಾದ ಡಾ. ಕುಮಾರ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಂದಿನಿ ಕೆ. ಆರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯಾದ ಡಾ. ಮಲ್ಲಿಕಾರ್ಜುನ ಬಾಲದಂಡಿ,ಉಪ ಕಾರ್ಮಿಕ ಆಯುಕ್ತರಾದ ನಾಗೇಶ್, ಸಹಾಯಕ ಕಾರ್ಮಿಕ ಆಯುಕ್ತರಾದ ವೀಣಾ, ಕಾರ್ಮಿಕ ಅಧಿಕಾರಿ ಡಾ. ಎಂ. ಸವಿತಾ, ಕಾರ್ಮಿಕ ನಿರೀಕ್ಷಕರಗಳು, ಕಾರ್ಮಿಕ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply