Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಗ್ರಾಮ ಪಂಚಾಯಿತಿ ನೂತನ ಕಟ್ಟಡ ಕಾಮಗಾರಿ ಮುಗಿದ ನಂತರ ಬಸ್ ನಿಲ್ದಾಣ ಮರುಸ್ಥಾಪನೆ

ಮದ್ದೂರು ತಾಲೂಕಿನ ಕೌಡ್ಲೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಈ ಹಿಂದೆ ಸಂಸದರಾಗಿದ್ದ ಸುಮಲತಾ ಅಂಬರೀಷ್ ಅವರು 5 ಲಕ್ಷ ರೂ ಅನುದಾನದಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಿದ್ದರು. ಆದರೆ ತಂಗುದಾಣದ ಹಿಂಭಾಗ ನೂತನ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ತಾತ್ಕಾಲಿಕವಾಗಿ ಬಸ್ ತಂಗುದಾಣವನ್ನು ತೆರವು ಮಾಡಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ನಂತರ ಮತ್ತೆ ತಂಗುದಾಣ ನಿರ್ಮಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದು ಅಧ್ಯಕ್ಷ ಲೋಕೇಶ್, ಪಂಚಾಯಿತಿ ಕಟ್ಟಡ ಕಟ್ಟಲು ಬಸ್ ತಂಗುದಾಣ ಕೆಡವಿದ್ದಾರೆ ಎಂದು ಕೆಲವರು ಅನಾವಶ್ಯಕವಾಗಿ ಗೊಂದಲ ಮೂಡಿಸಿದ್ದಾರಷ್ಟೇ. ಆದರೆ ಗ್ರಾಮದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಕಟ್ಟಡ ನಿರ್ಮಾಣ ಮಾಡಲು ಪೂರಕವಾಗಿ ಕೆಲಸಕ್ಕಾಗಿ  ತಾತ್ಕಾಲಿಕವಾಗಿ ಬಸ್ ನಿಲ್ದಾಣವನ್ನು ತೆರವು ಮಾಡಲಾಗಿದೆ. ಕಟ್ಟಡ ನಿರ್ಮಾಣವಾದ ನಂತರ ಅದೇ ಜಾಗದಲ್ಲಿ ತಂಗುದಾಣ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಸಭೆಯಲ್ಲಿ  ತೀರ್ಮಾನ  ಮಾಡಲಾಗಿದೆ.ಆದ್ದರಿಂದ ಸಾರ್ವಜನಿಕರು ಹಾಗೂ ಸುಮಲತಾ ಅಂಬರೀಷ್ ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಕೌಡ್ಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರಸಿಂಹಮೂರ್ತಿ ಮಾತನಾಡಿ, ಹಾಲಿ ಇರುವ ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲಾವಸ್ಥೆವಾಗಿರುವುದರಿಂದ ಗ್ರಾಮದ ಮಧ್ಯಭಾಗದಲ್ಲಿ ಸಮುದಾಯ ಶೌಚಾಲಯ ಹಾಗೂ 1 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, 2022-23ನೇ ಸಾಲಿನ ಜಲಜೀವನ್ ಮಿಷನ್ ಯೋಜನೆಯಡಿ 50 ಸಾವಿರ ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮುಕ್ತಾಯದ ಹಂತದಲ್ಲಿದೆ. ಅಂತೆಯೇ ಮುಂದೆ ಇರುವ 40*40 ಖಾಲಿ ಜಾಗದಲ್ಲಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಕಟ್ಟಲು ತೀರ್ಮಾನ ಮಾಡಿರುವ ಆಡಳಿತ ಮಂಡಳಿ, ಆಗಸ್ಟ್ 18 ರಂದು ನಡೆದ ಕೌಡ್ಲೆ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ 5ನೇ ಸಾಮಾನ್ಯ ಸಭೆಯಲ್ಲಿ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣವನ್ನು ಬಿಚ್ಚಿಡುವ ಸದರಿ ವಿಷಯವಾಗಿ ಸಭೆಯಲ್ಲಿ ಚರ್ಚಿಸಲಾಗಿದೆ. ಕೌಡ್ಲೆ ಗ್ರಾಮದ ಬಸ್ ಸೆಲ್ವರ್‌ನ ಹಿಂಭಾಗ ಗ್ರಾಮ ಪಂಚಾಯಿತಿ ಆಸ್ತಿಯಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಬೇಕಾಗಿರುವುದರಿಂದ ಅಡ್ಡಲಾಗಿರುವ ತಂಗುದಾಣವನ್ನು ತೆರವು ಮಾಡಲಾಗಿದೆ. ಕಟ್ಟಡ ಕಾರ್ಯ ಪೂರ್ಣಗೊಂಡ ನಂತರ ಬಸ್ ನಿಲ್ದಾಣವನ್ನು ಮರು ಸ್ಥಾಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಗ್ರಾಮಸ್ಥರಾದ ಶ್ರೀಧರ್ ಮಾತನಾಡಿ, ಕೆಲವರು ಗ್ರಾಮದಲ್ಲಿ ಇಂತಹ ಗೊಂದಲದ ವಾತಾವರಣ ಸೃಷ್ಟಿ ಮಾಡಿದ್ದಾರೆ. ನಾನು ಒಬ್ಬ ಅಂಬರೀಷ್ ಅವರ ಅಪ್ಪಟ ಅಭಿಮಾನಿಯಾಗಿದ್ದು,ತಂಗುದಾಣವನ್ನು ತೆರವುಗೊಳಿಸುವ ವೇಳೆ ಅಧ್ಯಕ್ಷರ ಬಳಿ ಪ್ರಶ್ನಿಸಿದಾಗ, ನಮಗೆ ಸುಮಲತಾ ಅಂಬರೀಷ್ ಅವರ ಮೇಲೆ ಗೌರವವಿದೆ. ಕಟ್ಟಡ ನಿರ್ಮಾಣದ ವೇಳೆ ಸಾಮಗ್ರಿಗಳನ್ನು ಕೊಂಡೊಯ್ಯಲು ಸಮಸ್ಯೆವಾಗುತ್ತದೆ ಎಂಬ ದೃಷ್ಟಿಯಿಂದ ಕಾನೂನಿನ ಚೌಕಟ್ಟಿನಲ್ಲಿ ತಾತ್ಕಾಲಿಕವಾಗಿ ತೆರವು ಮಾಡಿದ್ದಾಗಿ ಹೇಳಿದ್ದಾರೆ. ಅದೇ ರೀತಿ ಕಟ್ಟಡ ನಿರ್ಮಾಣದ ನಂತರ ಬಸ್ ನಿಲ್ದಾಣವನ್ನು ಯಥಾ ಸ್ಥಿತಿ ಪುನರ್‌ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಗ್ರಾಮ ಪಂಚಾಯತಿ ಸದಸ್ಯರಾದ ಪುಟ್ಟಸ್ವಾಮಿ , ಮಹಾಲಕ್ಷ್ಮಿ , ಮನು , ಅಂಜನಾ ಕುಮಾರಿ , ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *

error: Content is protected !!