Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಎಚ್.ಕೋಡಿಹಳ್ಳಿಯಲ್ಲಿ ನೂತನ ಗ್ರಂಥಾಲಯ ಹಾಗೂ ಮಾಹಿತಿ ಅರಿವು ಕೇಂದ್ರ ಉದ್ಘಾಟನೆ

ಭಾರತದ ಭೂಮಿ ಸ್ವರ್ಗದ ಭೂಮಿಯಾಗಿದ್ದು,ಇದನ್ನು ನಾವು ನರಕವನ್ನಾಗಿಸಿ ಬದುಕುತ್ತಿದ್ದೇವೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ. ಕೆ.ಎಂ. ಹರಿಣಿಕುಮಾರ್ ವಿಷಾದಿಸಿದರು.
ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮ ಪಂಚಾಯಿತಿ ವತಿಯಿಂದ ಎಚ್. ಕೋಡಿಹಳ್ಳಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಿರುವ ಗ್ರಂಥಾಲಯ ಹಾಗೂ ಮಾಹಿತಿ ಅರಿವು ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದೇಶದಲ್ಲಿರುವ ಭೂಮಿ ನರಕವಾಗಿದ್ದು, ಅದನ್ನು ಅಲ್ಲಿನ ಜನತೆ ಸ್ವರ್ಗದ ಭೂಮಿಯನ್ನಾಗಿಸಿದ್ದಾರೆ. ಆದರೆ ನಮ್ಮಲ್ಲಿ ಇಂತಹ ಧೋರಣೆ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತದ ವಿಜ್ಞಾನಿಗಳು, ತಂತ್ರಜ್ಞರಿಗೆ ವಿದೇಶಗಳಲ್ಲಿ ಹೆಚ್ಚಿನ ಮನ್ನಣೆ ಇದೆ. ಆದರೆ ಇಲ್ಲಿನ ರಾಜಕಾರಣಿಗಳು, ವ್ಯವಸ್ಥೆ ಅಂತಹ ಜ್ಞಾನಿಗಳನ್ನು ಉಪಯೋಗಿಸಿಕೊಂಡು ಸದ್ಬಳಕೆ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. ಆದ್ದರಿಂದಲೇ ನಾವು ಇನ್ನೂ ಮುಂದುವರಿಯುತ್ತಿರುವ ರಾಷ್ಟ್ರವಾಗಿ ಭಾರತವನ್ನು ನೋಡುತ್ತಿದ್ದೆವೆ ಎಂದರು.
ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಜ್ಞಾನ ಎಂಬುದು ಸಂಪತ್ತು ಇದ್ದಂತೆ. ಹಬ್ಬ ಹರಿದಿನಗಳಿಗೆ ಕೊಡುವಷ್ಟು ಒತ್ತನ್ನು ನಾವು ಜ್ಞಾನಕ್ಕೆ ಕೊಡುವುದಿಲ್ಲ. ತಂದೆ ತಾಯಂದಿರು ಹೆಚ್ಚು ಓದಿದರೆ ಮಕ್ಕಳೂ ಸಹ ಓದುತ್ತಾರೆ. ಪೋಷಕರು ಮಕ್ಕಳೊಂದಿಗೆ ಪುಸ್ತಕ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಮಕ್ಕಳೂ ಸಹ ಓದುವುದನ್ನು ರೂಢಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಮಕ್ಕಳಿಗೆ ಜ್ಞಾನ ಕೊಟ್ಟರೆ ಏನು ಬೇಕಾದರೂ ಸಾಧಿಸಬಹುದು. ಮಕ್ಕಳನ್ನು ಬೆಳೆಸಿದಷ್ಟು ಊರು, ಜಿಲ್ಲೆ, ರಾಜ್ಯ, ರಾಷ್ಟ್ರದ ಕೀರ್ತಿ ಪತಾಕೆ ಹೆಚ್ಚುತ್ತದೆ. ನೀತಿ ಕಥೆಗಳನ್ನು ಓದಿ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳುವಂತಹ ಕೆಲಸವನ್ನು ಪೋಷಕರು ಮಾಡಬೇಕು. ಮಕ್ಕಳನ್ನು ಸರಿದಾರಿಗೆ ತಂದು ದೇಶದ ಸತ್ಪçಜೆಗಳನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಎಸ್. ಸವಿತಾ ಮಾತನಾಡಿ, ನಮ್ಮ ಗ್ರಾಮದಲ್ಲಿ ಇದುವರೆವಿಗೂ ಗ್ರಂಥಾಲಯ ಇರದೇ ನಾವು ಮತ್ತು ನಮ್ಮ ಮಕ್ಕಳು ಗೋಪಾಲಪುರಕ್ಕೆ ಹೋಗಬೇಕಿತ್ತು. ಇದನ್ನು ಮನಗಂಡು ನಾವೇ ಇಲ್ಲಿ ಗ್ರಂಥಾಲಯ ತೆರೆದಿದ್ದೆವೆ. ಪ್ರತಿಯೊಬ್ಬರೂ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಆಟ, ಪಾಠದ ಜೊತೆಗೆ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಶಿಕ್ಷಕ ನಾಗರಾಜು ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜು, ಕವಿತಾ, ಮುಖ್ಯಶಿಕ್ಷಕಿ ಅಗಸ್ಟಿನ್ ಮೇರಿ, ಗ್ರಾಮಸ್ಥರಾದ ಸರೋಜಮ್ಮ, ನಾಗಣ್ಣ, ಮಲ್ಲಿಕಾರ್ಜುನ, ಸೋಮಶೇಖರ, ಆನಂದ, ಚಂದ್ರಶೇಖರ್, ರಮೇಶ, ಗ್ರಾ.ಪಂ. ಕಾರ್ಯದರ್ಶಿ ಜವರೇಗೌಡ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!