
ಮಂಡ್ಯ : ಅನ್ಯಕ್ರಾಂತವಾದ ಭೂಮಿ ವಿನ್ಯಾಸ ನಕ್ಷೆಯ ಅನುಮೋದನೆಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿಯ ಮೂವರು ನೌಕರರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಚೇರಿಯ ನೌಕರರಾದ ಯೋಜನಾ ನಿರ್ದೇಶಕಿ ಅನನ್ಯ,ನೌಕರೆ ಸೌಮ್ಯ ಹಾಗೂ ಹೊರಗುತ್ತಿಗೆ ನೌಕರ ಹರೀಶ್ ಎಂಬುವರೇ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.
ಮದ್ದೂರು ತಾಲೂಕು ಚಂದೂಪುರ ಗ್ರಾಮದ ಪುನೀತ್ ಅವರು ವಿನ್ಯಾಸ ನಕ್ಷೆಯ ಅನುಮೋದನೆಗಾಗಿ ನಗರ ಯೋಜನಾ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅನುಮತಿ ನೀಡಲು ಸದರಿ ನೌಕರರು 30 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ.
ಈ ಬಗ್ಗೆ ಪುನೀತ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರ ಸೂಚನೆ ಮೇರೆಗೆ ಯೋಜನಾ ನಿರ್ದೇಶಕಿ ಅನನ್ಯ,ನೌಕರೆ ಸೌಮ್ಯ ಹಾಗೂ ಹೊರಗುತ್ತಿಗೆ ನೌಕರ ಹರೀಶ್ ಅವರಿಗೆ 15 ಸಾವಿರ ರೂ. ಹಣ ಕೊಡುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ಮೂವರು ನೌಕರರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಹಾಗೂ ಇನ್ಸ್ಪೆಕ್ಟರ್ ಬ್ಯಾಟರಾಯಗೌಡ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ವಶಕ್ಕೆ ಪಡೆದ ನೌಕರರನ್ನು ವಿಚಾರಣೆಗೊಳಪಡಿಸಿದ್ದಾರೆ.

Leave a Reply