
ಮಂಡ್ಯ: ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಭಾವೈಕ್ಯತೆ ಬೆಸೆಯುವ ಸಿಡಿ ಉತ್ಸವವು ಫೆ. 7ರಂದು ಅದ್ದೂರಿಯಾಗಿ ಜರುಗಲಿದೆ.
ಗ್ರಾಮದ ಶ್ರೀ ಕಾಳಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ತಂಬಿಟ್ಟಿನ ಆರತಿ ಮತ್ತು ಕಳಸ ದೊಂದಿಗೆ ಜಮಾಣೆಗೊಂಡ ಗ್ರಾಮ ಯಜಮಾನರು ಮತ್ತು ಮುಖಂಡರ ಸಮ್ಮುಖದಲ್ಲಿ ತಮಟೆ ನಗಾರಿ ನಾದ ಮೇಳದೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಸಿಡಿ ಉತ್ಸವದ ಮಾಳಕ್ಕೆ ತೆರಳುವರು.
ಗ್ರಾಮದಲ್ಲಿರುವ ಗ್ರಾಮ ದೇವತೆಗಳಾದ ಶ್ರೀ ಬಸವೇಶ್ವರ, ಶ್ರೀ ಬೋರಪ್ಪ ಹಾಗೂ ಶ್ರೀ ಮಾರಮ್ಮ ದೇವಸ್ಥಾನಗಳಲ್ಲಿ ಪೂಜೆ ಸಮರ್ಪಿಸಿದ ಬಳಿಕ ಮಾಳದಲ್ಲಿ ತಂಬಿಟ್ಟಿನ ಆರತಿಗೆ ಹೂವು ಹೊಂಬಾಳೆ ಹಾಗೂ ಪೂಜಾ ಕೈಯಗಳೊಂದಿಗೆ ಗ್ರಾಮದ ಒಳಿತಿಗಾಗಿ, ಭಾವೈಕ್ಯತೆ ವೃದ್ಧಿಗಾಗಿ ಹಾಗೂ ಮಳೆ ಬೆಳೆ ಸಮೃದ್ಧಿಗಾಗಿ, ಸಂಕಷ್ಟಗಳ ಪರಿಹಾರ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದ ನಂತರ ಹರಕೆ ಕಟ್ಟಿಕೊಂಡವರು ಕೋಳಿ ಕುರಿ ಆಡು ಮೇಕೆಗಳನ್ನು ಸಮರ್ಪಿಸಿ ದೇವರ ಕೃಪೆಗೆ ಧನ್ಯರಾಗಿ ಪ್ರಸಾದ ವಿನಯೋಗಿಸುವರು.
ಭಾವೈಕ್ಯತೆಯ ಸಿಡಿ ಉತ್ಸವ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪ ಅಲಂಕಾರ ಮಾಡಿ ಎಲ್ಲಾ ಸಮುದಾಯದವರು ಸಂಭ್ರಮದಿಂದ ಸಿಡಿ ಉತ್ಸವದಲ್ಲಿ ಭಾಗವಹಿಸುವರು.
ಮಳವಳ್ಳಿಯಲ್ಲಿ ಸಿಡಿ ಉತ್ಸವ ಆದ ಒಂದು ವಾರದ ಬಳಿಕ ಪೂರ್ವಿಕರ ವಾಡಿಕೆಯಂತೆ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಭಾವೈಕ್ಯತೆಯ ಸಿಡಿ ಉತ್ಸವ ನಡೆಯಲಿದೆ ಎಂದು ಗ್ರಾಮಸ್ಥರು ತಿಳಿಸಿದರು.

Leave a Reply