Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ನಾನು ಯಾರಿಗೂ ಅಗೌರವ ತೋರಿಲ್ಲ : ಪಿಡಿಓ ಸುವರ್ಣ


ಮಂಡ್ಯ:   ನಾನು ಯಾರಿಗೂ ಅಗೌರವ ತೋರಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ನಿರ್ವಹಿಸುತ್ತಿದ್ದೇನೆ. ಸದಸ್ಯ ಜಗದೀಶ್ ಅವರು ವಿನಾಕಾರಣ ಏನೇನೋ ಪ್ರಶ್ನೆಗಳನ್ನೆಲ್ಲಾ ಕೇಳಿ ಸಿಟ್ಟಿಗೇಳುವಂತೆ ಮಾಡುತ್ತಿದ್ದಾರೆ. ಆದರೂ ನಾನು ಅವರೊಂದಿಗೆ ಸಂಯಮದಿಂದಲೇ ನಡೆದುಕೊಂಡಿದ್ದೇನೆ ಎಂದು ಕೆ.ಆರ್.ಪೇಟೆ ತಾಲೂಕು ಮಂದಗೆರೆ ಗ್ರಾಪಂ ಪಿಡಿಓ ಸುವರ್ಣ ಹೇಳಿದರು.
ಸದಸ್ಯ ಜಗದೀಶ್ ದುರಾಸೆ ಮನುಷ್ಯ. ಅವರು ಸುಳ್ಳು ಬಿಲ್‌ಗಳನ್ನು ಬರೆಯುವಂತೆ ನನ್ನ ಮೇಲೆ ಒತ್ತಡ ಹೇರುತ್ತಿದ್ದರು. ಅದಕ್ಕೆ ನಾನು ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಇಲ್ಲಿ ಅಧ್ಯಕ್ಷರು ಮತ್ತು ಪಿಡಿಓ ಅವರು ಹೇಳಿದಂತೆ ಕೇಳಬೇಕು. ಅವರಿಗೆ ವಿರುದ್ಧವಾಗಿ ನಡೆದರೆ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಜಗಳಕ್ಕಿಳಿಯುತ್ತಿದ್ದರು. ನನಗೆ ಎಷ್ಟೇ ಕೋಪ ಬರುವಂತೆ ಅವರು ನಡೆದುಕೊಂಡರೂ ಅವರಿಗೆ ಗೌರವ ಕೊಟ್ಟೇ ನಡೆದುಕೊಂಡಿದ್ದೇನೆ. ಸಹನೆ ಮೀರಿ ವರ್ತಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಸದಸ್ಯ ಜಗದೀಶ್ ಅವರನ್ನು ಹೊರತುಪಡಿಸಿ ಅಧ್ಯಕ್ಷರು-ಉಪಾಧ್ಯಕ್ಷರು ಮತ್ತು ಇತರೆ ಸದಸ್ಯರೆಲ್ಲರೂ ನನ್ನೊಂದಿಗೆ ವಿಶ್ವಾಸ, ಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಜಗದೀಶ್ ಅವರೇ ಒಮ್ಮೊಮ್ಮೆ ನೀವು ಇಲ್ಲಿಂದ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದೆಲ್ಲಾ ಒತ್ತಡ ಹೇರುತ್ತಾರೆ. ಪಂಚಾಯಿತಿಯೊಳಗೆ ಯಾವುದೇ ಅವ್ಯವಹಾರ ನಡೆಯದಿದ್ದರೂ ಅವುಗಳ ಬಗ್ಗೆ ಪ್ರಶ್ನಿಸುವುದು, ತಪ್ಪಿದ್ದರೆ ಮೇಲಧಿಕಾರಿಗಳಿಗೆ ದೂರು ಕೊಟ್ಟು ತನಿಖೆ ಮಾಡಿಸಲಿ. ಆದರೆ, ಅವರು ನನ್ನ ಬಳಿ ಸಲ್ಲದ ವಿಷಯಗಳನ್ನು ಮುಂದಿಟ್ಟುಕೊಂಡು ಚರ್ಚೆಗಿಳಿಯುತ್ತಾರೆ. ಎಷ್ಟೇ ಸಮಜಾಯಿಷಿ ನೀಡಿದರೂ ಸುಮ್ಮನಾಗದೆ ಒಂದೇ ಸಮನೆ ಪೀಡಿಸುತ್ತಿರುತ್ತಾರೆ. ಅವರು ಎಷ್ಟೇ ಸಿಟ್ಟಿಗೇಳಿಸಿದರೂ ಸಂಯಮ ಕಳೆದುಕೊಳ್ಳದೆ ಗೌರವದಿಂದಲೇ ಉತ್ತರ ನೀಡಿದ್ದೇನೆ. ಜಗದೀಶ್‌ಗೆ ಚಪ್ಪಲಿ ತೋರಿಸುವಷ್ಟು ಕೆಳಮಟ್ಟಕ್ಕೆ ಎಂದಿಗೂ ನಾನು ಇಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!