Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮಂಡ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆ : ₹ 2.20 ಕೋಟಿ ಮೊತ್ತದ ಚಿನ್ನಾಭರಣ ವಶ


ಮಂಡ್ಯ ಜಿಲ್ಲೆಯ ನಾಲ್ಕು ಪೊಲೀಸ್ ಉಪ ವಿಭಾಗಗಳಲ್ಲಿ ನಡೆದಿರುವ ಕಳ್ಳತನ ಪ್ರಕರಣಗಳಲ್ಲಿ 28 ಮಂದಿ ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣ, ಬೆಳ್ಳಿ, ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 2.20 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭಾರಾಣಿ ತಿಳಿಸಿದರು.

ಮಂಡ್ಯ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಮಳವಳ್ಳಿ ಉಪ ವಿಭಾಗಗಳಿಂದ ಒಟ್ಟಾರೆ 39 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, 1.484 ಕೆ.ಜಿ. ಚಿನ್ನಾಭರಣ, 950 ಗ್ರಾಂ ಬೆಳ್ಳಿ, 26 ದ್ವಿಚಕ್ರ ವಾಹನಗಳು ಹಾಗೂ 30 ಸಾವಿರ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಕಾರು, 251 ಗ್ರಾಂ ತೂಕದ ಚಿನ್ನಾಭರಣ, 79 ಗ್ರಾಂ ತೂಕದ ಚಿನ್ನದ ಗಟ್ಟಿ ಸೇರಿ ಒಟ್ಟು 330 ಗ್ರಾಂ ಚಿನ್ನ, ನಗರದ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 950 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳು, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದರು.

ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯ 1.05 ಗ್ರಾಂ ತೂಕದ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ, ಮದ್ದೂರು ಪೊಲೀಸ್ ಠಾಣೆಯ ಪ್ರಕರಣದಲ್ಲಿ 50 ಗ್ರಾಂ ಚಿನ್ನದ ಮಾಂಗಲ್ಯ ಸರ, 32 ಗ್ರಾಂ ಚಿನ್ನದ ಸರ ಸೇರಿದಂತೆ 82 ಗ್ರಾಂ ಚಿನ್ನಾಭರಣ, ಕೆಸ್ತೂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11.2 ಗ್ರಾಂ ಚಿನ್ನದ ಸರ, 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 4 ಪ್ರಕರಣಗಳಲ್ಲಿ 156.36 ಗ್ರಾಂ ತೂಕದ ಚಿನ್ನಾಭರಣ, 30 ಸಾವಿರ ನಗದು, 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಾಂಡವಪರ ತಾಲೂಕು ಚಿನಕುರಳಿ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದ ಮಧು ಬಿನ್ ಹೊಂಬಾಳಯ್ಯ ಎಂಬಾತನ್ನು ಬಂಧಿಸಿದ್ದು, ಆತನಿಂದ 3.50 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈತನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ತಿಳಿಸಿದರು.

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 200 ಗ್ರಾಂ ಚಿನ್ನಾಭರಣ ಹಾಗೂ 6 ಬೈಕ್‌ಗಳನ್ನು ವಶಪಕ್ಕೆ ಪಡೆಯಲಾಗಿದೆ ಎಂದರು.

ಇದೇ ವೇಳೆ ಚಿನ್ನಾಭರಣ, ದ್ವಿಚಕ್ರ ವಾಹನಗಳನ್ನು ಕಳೆದುಕೊಂಡಿದ್ದ ವಾರಸುದಾರರಿಗೆ ವಸ್ತುಗಳನ್ನು ವಿತರಿಸಲಾಯಿತು.

ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಇ. ತಿಮ್ಮಯ್ಯ, ಎಸ್‌.ಇ. ಗಂಗಾಧರಸ್ವಾಮಿ, ಡಿವೈಎಸ್ಪಿ ಚಲುವರಾಜು, ಕೃಷ್ಣಕುಮಾರ್, ಯಶ್ವಂತ್‌ಕುಮಾ‌ರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಗೋಷ್ಠಿಯಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!