Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮಂಡ್ಯದಲ್ಲಿ ಹಳ್ಳ ಹಿಡಿದ ಸ್ವಚ್ಛ ಭಾರತ್ ಮಿಷನ್ ಯೋಜನೆ

ನಾಮಫಲಕಕ್ಕೆ ಸೀಮಿತವಾದ ತೂಬಿನಕೆರೆ,ಬೇಲೂರು ಗ್ರಾ.ಪಂ ಸ್ವಚ್ಛ ಸಂಕೀರ್ಣಗಳು

ವರದಿ : ಎಂ. ಚಾಮರಾಜು

ಗ್ರಾಮಗಳನ್ನು ಸ್ವಚ್ಛ ಹಾಗೂ ಸುಂದರ ಗೊಳಿಸಲು ಸರ್ಕಾರದ ಲಕ್ಷಾಂತರ ಹಣವನ್ನು ಗ್ರಾಮ ಪಂಚಾಯಿತಿಗಳು ಖರ್ಚು ಮಾಡಿದ್ದರೂ ಸಹ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯು ಮಂಡ್ಯ ಜಿಲ್ಲೆಯಲ್ಲೂ ಹಳ್ಳ ಹಿಡಿದೆ.
ದೇಶದ ಪ್ರತಿಯೊಂದು ಹಳ್ಳಿಯನ್ನು ಸ್ವಚ್ಛವಾಗಿಟ್ಟಿಕೊಳ್ಳಲು ಅನುಕೂಲವಾಗುವಂತೆ ಸರ್ಕಾರವು ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಸ್ವಚ್ಛತೆಗೆ ಗಮನ ಕೊಟ್ಟಿದ್ದು ಸರಿಯಷ್ಟೇ, ಪ್ರತಿ ಗ್ರಾಮ  ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರತಿಯೊಂದು ಗ್ರಾಮದ ಮನೆಗಳಿಂದ  ಸಂಗ್ರಹಿಸಿದ ಕಸವನ್ನು ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಿಸಿದ ಘನ ತ್ಯಾಜ್ಯ ನಿರ್ವಹಣಾ ಘಟಕದ ಮೂಲಕ ಪ್ಲಾಸ್ಟಿಕ್,  ಕಬ್ಬಿಣ,ಗಾಜು ಸೇರಿದಂತೆ ಎಲ್ಲಾ ವಸ್ತುಗಳನ್ನು ವಿಂಗಡಿಸಿ ಸಮರ್ಪಕವಾಗಿ ವಿಲಿಯವರೆಗೆ ಮಾಡಲು ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಅವಕಾಶವನ್ನು ಕಲ್ಪಿಸಲಾಗಿದೆ.

ಮಂಡ್ಯ ಜಿಲ್ಲೆಯ ಕೆಲವೇ ಕೆಲವು ಗ್ರಾಮ ಪಂಚಾಯತಿಗಳು ಸ್ವಂತ ಕಟ್ಟಡದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಿಸಿದ್ದರೆ, ಇನ್ನೂ ಕೆಲವು ಗ್ರಾಮ ಪಂಚಾಯಿತಿಗಳು ತಮ್ಮ ಹಳೆಯ ಕಟ್ಟಡಗಳಿಗೆ ಸ್ವಚ್ಛ ಸಂಕೀರ್ಣ ಎಂಬ ನಾಮಫಲವನ್ನು ಹಾಕಿಕೊಂಡು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಸ್ವಚ್ಛ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ವರದಿಯನ್ನು ನೀಡಿರುತ್ತಾರೆ.
ಅಧಿಕಾರಿಗಳು ನೀಡುವ ವರದಿಯನ್ನು  ಪರಿಶೀಲಿಸದೇ ಮಂಡ್ಯ ಜಿಲ್ಲೆಯ ಪ್ರಗತಿಗೆ ಸಂಬಂಧಿಸಿದಂತೆ ಸಂಸದರು, ಉಸ್ತುವಾರಿ ಸಚಿವರ ನೇತೃತ್ವದಲ್ಲಿ  ನಡೆಯುವ ಸಭೆಗಳಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಶಾಶ್ವತ ಹಾಗೂ ಹಳೆ ಕಟ್ಟಡಗಳಲ್ಲಿ ಘನ ತ್ಯಾಜ್ಯ  ನಿರ್ವಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿಯನ್ನು ನೀಡಲಾಗುತ್ತಿದೆ.

ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಲಕ್ಷಾಂತರ ರೂ ಹಣವನ್ನು ಖರ್ಚು ಮಾಡಿ ಘನ ತ್ಯಾಜ್ಯ  ನಿರ್ವಹಣಾ ಘಟಕಗಳನ್ನು ನಿರ್ಮಿಸಿದ್ದರೂ ಸಹ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಘಟಕಗಳಿಗೆ ಬೀಗ  ಹಾಕಿರವುದರಿಂದ  ಗ್ರಾಮಗಳಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವೇರಿಯನ್ನು ಮಾಡುತ್ತಿಲ್ಲ.( ಸ್ವಚ್ಛ ಶನಿವಾರ ಕಾರ್ಯಕ್ರಮವು ಫೋಟೋಕ್ಕೆ ಮಾತ್ರ ಸೀಮಿತವಾಗಿದೆ )

ಪ್ರತಿ ಗ್ರಾಮ ಪಂಚಾಯಿತಿಗಳು ಲಕ್ಷಾಂತರ ರು ಹಣವನ್ನು ಖರ್ಚು ಮಾಡಿ, ಗ್ರಾಮಗಳ ಪ್ರತಿ ಮನೆಗೂ ಕಸ ಸಂಗ್ರಹಣೆ ಮಾಡಲು ಅನುಕೂಲ ವಾಗುವಂತೆ ಕಸದ ಡಬ್ಬಿಗಳನ್ನು   ನೀಡುವುದರ ಜೊತೆಗೆ ವಾಹನಗಳನ್ನು ಖರೀದಿಸಿವೆ.
ಕಸ ಸಂಗ್ರಹಿಸುವ ಕೆಲಸ ನಿರ್ವಹಿಸಬೇಕಾದ ವಾಹನಗಳು ಹಲವು ಗ್ರಾಮ ಪಂಚಾಯಿತಿಗಳ ಕಚೇರಿ ಆವರಣದಲ್ಲಿ ನಿಂತಿವೆ.
ಮಂಡ್ಯ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕಾಟಾಚಾರಕ್ಕೋ, ತೋರಿಕೆಗೊ ಸ್ವಚ್ಛ ಸಂಕೀರ್ಣ ಎಂಬ  ನಾಮಪಲಕಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಯಾವುದೇ ಕಸ ಸಂಗ್ರಹ ಮಾಡಿ, ವಿಂಗಡಣೆ ಕಾರ್ಯವನ್ನು ಮಾಡುತ್ತಿಲ್ಲ.

ಮಂಡ್ಯ ಜಿಲ್ಲಾ ಪಂಚಾಯತಿ ಸಿಇಓ ರವರು ಇನ್ನು ಮುಂದಾದರೂ ಘನ ತ್ಯಾಜ್ಯ ನಿರ್ವಹಣಾ ಘಟಕಗಳನ್ನು  ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂಬ ವರದಿ ನೀಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಪ್ರತಿ ಗ್ರಾಮಗಳಲ್ಲಿ ಕಸ ಸಂಗ್ರಹಿಸಿ,ವಿಂಗಡಣೆ ಮಾಡುವ ಕಾರ್ಯಕ್ಕೆ ಯಾವ ರೀತಿಯ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!