
ಮಂಡ್ಯ: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯಲು ಮಂಡ್ಯ ಮಿಮ್ಸ್ ಕಾಲೇಜಿನ ಮಾಹಿತಿ ಕಛೇರಿಗೆ ತೆರಳಿದ ಸಂದರ್ಭದಲ್ಲಿ ಏಕಾಏಕಿ ಹಲ್ಲೆ ಮಾಡಿದ ಮಿಮ್ಸ್ ನೌಕರನಾದ ಬಿ.ಕೆ.ಚಂದ್ರಶೇಖರ್ ವಿರುದ್ಧ ರೌಡಿ ಶೀಟರ್ ತೆರೆಯಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಚ್.ಎಸ್.ಸಾಗರ್ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆ.19ರಂದು ಮಿಮ್ಸ್ ಕಾಲೇಜಿನ ಕಾಲೇಜಿನ ಮಾಹಿತಿ ಕೇಂದ್ರದಲ್ಲಿ ಬಲರಾಮ್ ಅವರ ಬಳಿ ಸಾರ್ವಜನಿಕ ಮಾಹಿತಿ ನೀಡುವಂತೆ ಮನವಿ ಮಾಡಿದ್ದ ವಿಷಯವನ್ನು ತಿಳಿದ ಬಿ.ಕೆ.ಚಂದ್ರಶೇಖರ್ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಅದು ಮಾತ್ರವಲ್ಲದೇ ನನ್ನ ಮೊಬೈಲ್ ಕಿತ್ತುಕೊಂಡು ಜಖಂ ಮಾಡಿದ್ದು, ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಇದರಿಂದ ಆತಂಕಕ್ಕೊಳಗಾಗಿ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತೆರಳಿದಾಗ, ಅಲ್ಲಿನ ಪೊಲೀಸರು ಲಿಖಿತ ದೂರು ಕೊಡುವಂತೆ ತಿಳಿಸಿದ್ದು, ಲಿಖಿತ ದೂರು ಸ್ವೀಕರಿಸಲಿಲ್ಲ. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿದ ನಂತರ ಮಾಡಿದ ತಪ್ಪಿಗಿಂತಲೂ ಕಡಿಮೆ ಆರೋಪದಡಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ದೂರಿದರು.
2007ರಲ್ಲಿ ಮಿಮ್ಸ್ ಗೆ ನೇಮಕವಾಗಿರುವ ಬಿ.ಕೆ.ಚಂದ್ರಶೇಖರ್ ದಾಖಲಾತಿಗಳು ಅಕ್ರಮವಾಗಿದ್ದು, ಅವರು ಮಿಮ್ಸ್ ನಲ್ಲಿ ಹುದ್ದೆ ಪಡೆದ ವಿಚಾರವು ಹಲವು ಅನುಮಾನಗಳನ್ನು ಮೂಡಿಸಿದೆ. ಈ ಸಂಬಂಧ ಲೋಕಾಯುಕ್ತರಲ್ಲಿ ದೂರು ನೀಡಿದ್ದೇನೆ. ಅಲ್ಲಿಯೂ ನೀನು ಏನು ಮಾಡಲಾಗುವುದಿಲ್ಲ ಎಂದು ಬಿ.ಕೆ.ಚಂದ್ರಶೇಖರ್ ಸವಾಲು ಹಾಕಿದ್ದಾರೆ ಎಂದು ಹೇಳಿದರು.
ಕೂಡಲೇ ನಕಲಿ ದಾಖಲಾತಿ ನೀಡಿ ಹುದ್ದೆ ಪಡೆದ ಬಿ.ಕೆ.ಚಂದ್ರಶೇಖರ್ ವಿರುದ್ಧ ಉನ್ನತ ತನಿಖೆ ಮಾಡಿ, ಕಾನೂನು ಕ್ರಮ ಕೈಗೊಂಡು ಜೈಲಿಗಟ್ಟಬೇಕು. ಈ ಹಿಂದೆಯೂ ಹಲವರ ಮೇಲೆ ಹಲ್ಲೆ ಮಾಡಿರುವ ಬಿ.ಕೆ.ಚಂದ್ರಶೇಖರ್ ವಿರುದ್ಧ ರೌಡಿ ಶೀಟರ್ ತೆರೆಯಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಅಣ್ಣಯ್ಯ, ಸಾಮಾಜಿಕ ಹೋರಾಟಗಾರ ಶಿವರಾಮು ಇದ್ದರು.

Leave a Reply