Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ನವ ಮಂಡ್ಯದ ಕನಸು ನನಸು ಮಾಡುವ ಗುರಿ : ಶಾಸಕ ರವಿಕುಮಾರ್

ಮಂಡ್ಯ : ಮುಂಬರುವ ದಿನಗಳಲ್ಲಿ ಮಂಡ್ಯ ನಗರವನ್ನು ಸಮಗ್ರ ಅಭಿವೃದ್ಧಿಗೊಳಿಸುವ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು 20 ಕೋಟಿ ರೂ. ಅನುದಾನದಲ್ಲಿ ನವ ಮಂಡ್ಯದ ಕನಸು ನನಸಾಗಲಿದೆ ಎಂದು ಶಾಸಕ ಪಿ.ರವಿಕುಮಾರ್ ಗೌಡ ಗಣಿಗ ಹೇಳಿದರು.
ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಕಾಯಕಯೋಗಿ ಫೌಂಡೇಶನ್ ನಿರ್ವಹಿಸುತ್ತಿರುವ ಶ್ರೀ ಶಿವಕುಮಾರಮಹಾಸ್ವಾಮೀಜಿ ಉದ್ಯಾನವನದ ಮುಖ್ಯದ್ವಾರ ಹಾಗೂ ಅಂಗನವಾಡಿ ಕೇಂದ್ರದ ಗುದ್ದಲಿ ಪೂಜೆ ನರೆವೇರಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಮಂಡ್ಯ ನಗರವನ್ನು ಬೇರೆಯವರು ತಿರುಗಿ ನೋಡುವಂತೆ ಮಾಡುವ ಅಭಿವೃದ್ಧಿ ಕಾರ್ಯಗಳ ನೀಲಿ ನಕ್ಷೆಯನ್ನು ತಯಾರಿಸಲಾಗಿದ್ದು ಮುಂಬರುವ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.
ನಡೆದಾಡಿದ ದೇವರು ಸಿದ್ದಗಂಗಾಶ್ರೀಗಳ ಉದ್ಯಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಕಾಯಕಯೋಗಿ ಸಂಸ್ಥೆಯವರು ಕಳೆದ ಹಲವಾರು ವರ್ಷಗಳಿಂದ ಹಸಿರೀಕರಣದ ಕಾಯಕದಲ್ಲಿ ನಿರತರಾಗಿರುವುದು ಶ್ಲಾಘನೀಯ. ಇಲ್ಲಿನ ವಾಯುವಿಹಾರಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಲೆಂದು ಧ್ಯಾನಮಂದಿರವನ್ನು ನಿರ್ಮಾಣಮಾಡಲಾಗುತ್ತಿದೆ. ಸ್ವಾಮೀಜಿಯವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕೆಂದು ಮುಖ್ಯದ್ವಾರವನ್ನು ಆಕರ್ಷಕವಾಗಿ ಮಾಡಲಾಗುತ್ತಿದ್ದು ಈಗಾಗಲೇ 5 ಲಕ್ಷ ಹಣವನ್ನು ಬಿಡುಗಡೆ ಮಾಡಿದ್ದೇನೆ ಎಂದರು.
ಮೂಲಭೂತ ಸೌಕರ್ಯಗಳು ಸೇರಿದಂತೆ ಉದ್ಯಾನವನದ ಲೈಟಿಂಗ್ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಸದಾ ಸಿದ್ದನಿದ್ದೇನೆ. ಮೂಲಭೂತ ಸೌಕರ್ಯಗಳು ನಗರಕ್ಕೆ 20ಕೋಟಿ ಅನುದಾನವನ್ನು ತರಲಾಗುತ್ತಿದ್ದು ಜನರ ಆಶಯಗಳನ್ನು ಈಡೇರಿಸಲಾಗುವುದು ಎಂದರು.


ಬಸವ ಭವನ ನಿರ್ಮಾಣ

ಮಂಡ್ಯನಗರದಲ್ಲಿ ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ಬಡವರಿಗೆ ಅನುಕೂಲವಾಗುರ ರೀತಿಯಲ್ಲಿ ಬಸವಭವನ ನಿರ್ಮಾಣ ಮಾಡಲು 50 ಲಕ್ಷ ರೂ. ಅನುದಾನ ನೀಡಲು ಸಿದ್ಧನಿದ್ದೇನೆ. ಲಿಂಗಾಯತರ ಸಮಾವೇಶದಲ್ಲಿ ಕೆಲವು ಮುಖಂಡರು ಬಸವಭವನ ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ. ಸಮುದಾಯದ ಮುಖಂಡರು ಸಭೆನಡೆಸಿ ಜಾಗ ಗುರುತಿಸಿಕೊಟ್ಟಲ್ಲಿ ಶೀಘ್ರವೇ ಬಸವಭವನ ನಿರ್ಮಾಣ ಮಾಡಲಾಗುವುದು ಎಂದರು.
ಸ್ವರ್ಣಸಂದ್ರದ ರಂಗಮAದಿರದ ಪಕ್ಕದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಅಂಗನವಾಡಿ ಕೇಂದ್ರ ನಿರ್ಮಿಸಲು ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಮುಖಂಡರಾದ ಎಂ.ಆರ್.ಮಂಜುನಾಥ್, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಶಾಸಕರಿಗೆ ಸಿದ್ದಗಂಗಾಶ್ರೀಗಳ ಭಾವಚಿತ್ರವನ್ನು ನೀಡಿ ಗೌರವಿಸಿದರು. ಪೌರಾಯುಕ್ತೆ ಪಂಪಶ್ರೀ, ಕಾಂಗ್ರೆಸ್ ಮುಖಂಡರಾದ ಶಿವನಂಜು ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖಂಡರಾದ ಸೋಮಶೇಖರ್, ಸುರೇಶ್, ತಿಲಕ್‌ರಾಜ್, ಮಂಜುನಾಥ್, ಕೆಂಪಣ್ಣ, ಮಲ್ಲಿಕಾರ್ಜುನಯ್ಯ, ಜಿ.ಮಹಾಂತಪ್ಪ, ಶಿವರಾಮ್, ಹೆಚ್.ಕೆ.ರುದ್ರಪ್ಪ, ಸುಮನ್, ಗುತ್ತಿಗೆದಾರ ಭೈರಪ್ಪ, ಬಸವರಾಳು ಬಸವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!