Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಆಧುನಿಕ ಭಾರತದ ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್ : ಡಾ.ಈ.ಸಿ.ನಿಂಗರಾಜ್ ಗೌಡ

ಮಂಡ್ಯ : ತಮ್ಮ ಜನಪರ ಅಭಿವೃದ್ಧಿ ಕೆಲಸದ ಮೂಲಕವೇ ರಾಜರ್ಷಿ ಎಂಬ ಬಿರುದು ಪಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಧುನಿಕ ಭಾರತದ ಶಿಲ್ಪಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಹಾಗೂ ಮೈಸೂರು ವಿಭಾಗದ ಬಿಜೆಪಿ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್ ಗೌಡ ಬಣ್ಣಿಸಿದರು.

ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ಭಾನುವಾರ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಅಖಿಲ ಕರ್ನಾಟಕ ಪ್ರಥಮ ಮಹಿಳಾ ಕನ್ನಡ ಅಕ್ಷರ ಜಾತ್ರೆ, ವಿವಿಧ ಪ್ರಶಸ್ತಿ ಪ್ರದಾನ ಮತ್ತು ಕವಿಗೋಷ್ಟಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ ಅತ್ಯಂತ ಪ್ರಸಿದ್ಧ ಮತ್ತು ಜನಪರ ರಾಜರಲ್ಲಿ ಒಬ್ಬರು. ಅವರನ್ನು ರಾಜರ್ಷಿ ಎಂದು ಕರೆಯಲಾಗುತ್ತಿತ್ತು, ಏಕೆಂದರೆ ಅವರು ರಾಜನಾಗಿದ್ದರೂ ಋಷಿಯಂತೆ ಸರಳತೆ, ಧರ್ಮನಿಷ್ಠೆ ಮತ್ತು ಜನಸೇವೆಯನ್ನು ಪಾಲಿಸುತ್ತಿದ್ದರು. ಅವರ ಆಡಳಿತಾವಧಿಯಲ್ಲಿ ಮೈಸೂರು ಸಂಸ್ಥಾನವು ಭಾರತದ ಅತ್ಯಂತ ಅಭಿವೃದ್ಧಿಶೀಲ ಮತ್ತು ಸುಶಾಸಿತ ಸಂಸ್ಥಾನಗಳಲ್ಲಿ ಒಂದಾಗಿ ಪ್ರಸಿದ್ಧಿಯಾಯಿತು ಎಂದು ಡಾ.ಈ.ಸಿ.ನಿಂಗರಾಜ್ ಗೌಡ ರವರು ತಿಳಿಸಿದರು.

ಚಾಮರಾಜ ಒಡೆಯರ್ ಅವರು ಬೇಗ ನಿಧನರಾದ ಕಾರಣ ಅವರ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬಾಲ್ಯದಲ್ಲೇ ರಾಜ್ಯದ ಉತ್ತರಾಧಿಕಾರಿಯಾದರು. ಆರಂಭದಲ್ಲಿ ತಾಯಿ ಕೆಂಪನಂಜಮ್ಮಣಿ ಅವರು ರಾಜ್ಯದ ಆಡಳಿತ ನೋಡಿಕೊಂಡರು. ನಾಲ್ವಡಿ ಅವರ ಕಾಲವನ್ನು ಮೈಸೂರು ಸಂಸ್ಥಾನದ ಸುವರ್ಣ ಯುಗ ಎನ್ನುತ್ತಾರೆ ಎಂದು ಡಾ.ಈ.ಸಿ.ನಿಂಗರಾಜ್ ಗೌಡ ರವರು ಸ್ಮರಿಸಿದರು.

ನಾಲ್ವಡಿ ಅವರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, 1916ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣರಾದರು. ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಿದರು. ಶಾಲೆಗಳು, ಕಾಲೇಜುಗಳು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು ಎಂದು ಶ್ಲಾಘಿಸಿದರು.

ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ನಡೆಸಿ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ, ಮೈಸೂರು ಸಿಲ್ಕ್ ಇಂಡಸ್ಟ್ರಿ, ಭದ್ರಾವತಿ ಐರನ್ ಅಂಡ್ ಸ್ಟೀಲ್ ವರ್ಕ್ಸ್ ಸ್ಥಾಪಿಸಿ, ವಿದ್ಯುತ್ ಉತ್ಪಾದನೆಗಾಗಿ ಶಿವನಸಮುದ್ರ ಜಲವಿದ್ಯುತ್ ಯೋಜನೆಗೆ ಉತ್ತೇಜನ ನೀಡಿದರು. ಮೈಸೂರು ಸಂಸ್ಥಾನವನ್ನು ಕೈಗಾರಿಕಾ ದೃಷ್ಟಿಯಿಂದ ಭಾರತದ ಮಾದರಿ ರಾಜ್ಯವನ್ನಾಗಿ ರೂಪಿಸಿದರು ಎಂದು ಡಾ.ಈ.ಸಿ.ನಿಂಗರಾಜ್ ಗೌಡ ರವರು ಬಣ್ಣಿಸಿದರು.

ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣಕ್ಕೆ ಮಹತ್ವದ ಪಾತ್ರವಹಿಸಿದರು. ಇದರ ಯೋಜನೆಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಪ್ರಮುಖ ಪಾತ್ರವಹಿಸಿದರು. ಈ ಅಣೆಕಟ್ಟು ಕೃಷಿ, ಕುಡಿಯುವ ನೀರು ಮತ್ತು ವಿದ್ಯುತ್ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿತು ಎಂದರು.

ಒಡೆಯರ್ ಅವರು ತಮ್ಮ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದಲ್ಲಿ ಉತ್ತಮ ರಸ್ತೆ, ಆರೋಗ್ಯ ಸೇವೆ ಮತ್ತು ನೀರಾವರಿ ವ್ಯವಸ್ಥೆ ಅಭಿವೃದ್ಧಿಪಡಿಸಿದರು. ದಲಿತರು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಂಡರು. ಸರ್ಕಾರಿ ಸೇವೆಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಿದರು.  ಕಲೆ ಮತ್ತು ಸಂಗೀತಕ್ಕೆ ಪ್ರೋತ್ಸಾಹ ನೀಡಿದ ಒಡೆಯರ್ ಅವರು, ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗೆ ಅಪಾರ ಪ್ರೋತ್ಸಾಹ ನೀಡಿದರು. ಮೈಸೂರು ಚಿತ್ರಕಲಾ ಶೈಲಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿದರು ಎಂದು ಡಾ.ಈ.ಸಿ.ನಿಂಗರಾಜ್ ಗೌಡ ರವರು ತಿಳಿಸಿದರು.

ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ಅಣೆಕಟ್ಟುಗಳು, ಬ್ಯಾಂಕುಗಳು ಸೇರಿದಂತೆ ಸಾರ್ವಜನಿಕ ಯೋಜನೆಗಳನ್ನು ನೀಡಿದರು. ಅಂಗವಿಕಲರು, ದಲಿತರು, ಮಹಿಳೆಯರು, ಕಾರ್ಮಿಕರ ಏಳ್ಗೆಗೆ ಶ್ರಮಿಸಿದ ಅವರ ಆಡಳಿತಕಾಲವನ್ನು ಮೈಸೂರು ಸಂಸ್ಥಾನದ ಸುವರ್ಣಯುಗ ಎಂದು ಇತಿಹಾಸದಲ್ಲಿ ದಾಖಲಿಸಲಾಗಿದೆ ಎಂದು ಡಾ.ಈ.ಸಿ.ನಿಂಗರಾಜ್ ಗೌಡ ರವರು ತಿಳಿಸಿದರು.

ಇತ್ತೀಚೆಗಷ್ಟೇ ಪರಿಸರ ದಿನಾಚರಣೆ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗಿಡಗಳನ್ನು ನೆಡುವುದರ ಜೊತೆಗೆ, ಬೆಳೆಸಬೇಕೆಂದು ಕರೆ ಕೊಟ್ಟಿದ್ದರು. ಅದರಂತೆ ದೇಶ ನಿವಾಸಿಗಳು ಗಿಡ ನೆಟ್ಟು ಮೋದಿ ಕರೆಯನ್ನ ಬೆಂಬಲಿಸಿದರು. ಕೇವಲ ಪರಿಸರ ದಿನಾಚರಣೆ ಸಂದರ್ಭದಲ್ಲಿ ಮಾತ್ರವಲ್ಲದೇ ಪ್ರತಿಯೊಬ್ಬರು ಮನೆಯ ಶುಭ ಸಮಾರಂಭಗಳಲ್ಲಿ ಗಿಡ ನೆಟ್ಟು ಪ್ರೋತ್ಸಾಹಿಸಬೇಕೆಂದು ಡಾ.ಈ.ಸಿ.ನಿಂಗರಾಜ್ ಗೌಡ ರವರು ಕರೆ ನೀಡಿದರು.

ಖ್ಯಾತ ಕವಿ ಹಾಗೂ ವೈದ್ಯ ಡಾ.ಚಂದ್ರಶೇಖರ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಪಾರ ಜನಸೇವೆ ಮಾಡಿರುವ ಹಿನ್ನೆಲೆಯಲ್ಲಿ ಅವರಿಗೆ ಭಾರತ ರತ್ನ ನೀಡಬೇಕು. ಆಳುವ ನಮ್ಮ ಸರ್ಕಾರ ಜನರ ಬೇಡಿಕೆಗೆ ಸ್ಪಂದಿಸಿ ಆದಷ್ಟು ಬೇಗ ಭಾರತ ರತ್ನ ಘೋಷಿಸಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕರ್ನಾಟಕ ಸೇವಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಅಕ್ಷರ ಜಾತ್ರೆಯ ಸಮ್ಮೇಳನಾಧ್ಯಕ್ಷೆ ಹಾಗೂ ಕವಿಯತ್ರಿ ಬಿ.ಆರ್.ಉಮಾ, ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಸಮಾಜ ಸೇವಕರಾದ ಆನಂದ್ ತಿರುಮಲ, ನವೀದ್ ಮುಲ್ಲಾ, ಆಧ್ಯಾತ್ಮ ಚಿಂತಕಿ ಡಾ.ಪೂರ್ಣಿಮಾ, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ಪದಾಧಿಕಾರಿಗಳಾದ ಮಂಗಲ ಶಿವಣ್ಣ, ನಾಗೇಶ್ ರಾಗಿಮುದ್ದನಹಳ್ಳಿ, ಎಲ್ಲರೊಳಗೊಂದಾಗು ಮಂಕು ತಿಮ್ಮ ಟ್ರಸ್ಟ್ ನ ವಿನಯ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!