Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ರಾಜ್ಯಾದ್ಯಂತ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ದಾಖಲೆಗಳ ಪರಿಶೀಲನೆಗಿಳಿದ ಸರ್ಕಾರ

ಮಂಡ್ಯ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಕಾನೂನುಬಾಹೀರ ನೇಮಕಾತಿ ಕುರಿತಂತೆ
ಲೋಕಾಯುಕ್ತದಲ್ಲಿ ದೂರು ದಾಖಲಾದ ಬೆನ್ನಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ
ನಿರ್ಮಿತಿ ಕೇಂದ್ರದಡಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿರುವ ಯೋಜನಾ
ವ್ಯವಸ್ಥಾಪಕರ ನೇಮಕ ಸಂಬಂಧ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ವರದಿ
ಸಲ್ಲಿಸುವಂತೆ ರಾಜ್ಯಸರ್ಕಾರ ಆದೇಶಿಸಿದೆ.


ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಂಡ್ಯ ಜಿಲ್ಲೆಯಲ್ಲಿ ನಿರ್ಮಿತಿ
ಕೇಂದ್ರದ ಯೋಜನಾ ವ್ಯವಸ್ಥಾಪಕರನ್ನು ಗುತ್ತಿಗೆ ಆಧಾರದ ಮೇಲೆ ಕಾನೂನುಬಾಹೀರವಾಗಿ ನೇಮಕ
ಮಾಡಿಕೊಂಡಿರುವುದಾಗಿ ದೂರು ಬಂದಿದೆ. ಈ ಬಗ್ಗೆ ಪರಿಶೀಲಿಸಿ ಕೈಗೊಂಡ ಕ್ರಮದ ಕುರಿತು
ಕಚೇರಿಗೆ ವರದಿ ಮಾಡುವಂತೆ ವಸತಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್
ಸಿಂಗ್ ಅವರಿಗೆ ಪತ್ರ ಮುಖೇನ ಸೂಚನೆ ನೀಡಿದ್ದಾರೆ.


ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ಮಂಡ್ಯ ನಿರ್ಮಿತಿ ಕೇಂದ್ರದ ಯೋಜನಾ
ವ್ಯವಸ್ಥಾಪಕರನ್ನು ಕಾನೂನುಬಾಹೀರವಾಗಿ ನೇಮಕ ಮಾಡಿರುವ ಕುರಿತು ಎಲ್ಲಾ
ದಾಖಲೆಗಳೊಂದಿಗೆ ಲೋಕಾಯುಕ್ತರು ಹಾಗೂ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳಿಗೆ ದೂರು
ಸಲ್ಲಿಸಿದ್ದರು.  ಕೆ.ಆರ್.ರವೀಂದ್ರ ಅವರು ಸಲ್ಲಿಸಿದ ದೂರನ್ನು ಆಧಾರವಾಗಿಟ್ಟುಕೊಂಡು
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಿರ್ಮಿತಿ ಕೇಂದ್ರದಡಿ ಗುತ್ತಿಗೆ ಆಧಾರದ ಮೇಲೆ ನೇಮಕ
ಮಾಡಿಕೊಳ್ಳಲಾಗಿರುವ ಯೋಜನಾ ವ್ಯವಸ್ಥಾಪಕರ ನೇಮಕ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ
ವರದಿಯನ್ನು ತುರ್ತಾಗಿ ಸಲ್ಲಿಸುವಂತೆ ತಿಳಿಸಿದ್ದಾರೆ.
ಇದೇ ವಿಷಯವಾಗಿ ಸೋಮವಾರ ನವೀನ್‌ರಾಜ್ ಸಿಂಗ್ ಅವರು ರಾಜ್ಯದ ಎಲ್ಲಾ
ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿ ನಿರ್ಮಿತಿ ಕೇಂದ್ರದ ಯೋಜನಾ
ವ್ಯವಸ್ಥಾಪಕರ ನೇಮಕ ಕುರಿತಂತೆ ಸತ್ಯಾಸತ್ಯತೆಯ ಬಗ್ಗೆ ಕೂಲಂಕುಷ ಪರಿಶೀಲನೆ
ನಡೆಸುವಂತೆ ಸೂಚಿಸಿದ್ದಾರೆ.

ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ನೇಮಕದ ಅಸಲಿಯತ್ತನ್ನೇ ಪರಿಶೀಲನೆಗೊಳಪಡಿಸುವಂತೆ ಮಾಡಿರುವುದು ಅಧಿಕಾರಿಗಳಲ್ಲಿ ನಡುಕ ಹುಟ್ಟಿಸುವಂತೆ
ಮಾಡಿದೆ. ಕಾನೂನುಬಾಹೀರವಾಗಿ ಮತ್ತು ನಕಲಿ ವಿದ್ಯಾರ್ಹತೆಯ ದಾಖಲೆಗಳನ್ನು ಸಲ್ಲಿಸಿ
ಹುದ್ದೆಗೆ ನೇಮಕಗೊಂಡಿರುವವರು ಒಳಗೊಳಗೇ ತಳಮಳಿಸುತ್ತಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!