Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸಂಜೀವಿನಿ ಯೋಜನೆಯಲ್ಲಿ ಲಕ್ಷಾಂತರ ರೂ. ಗೋಲ್‌ಮಾಲ್…?? ಮಹಿಳಾ ಆಯೋಗಕ್ಕೆ ದೂರು

ಮದ್ದೂರು: ಸಂಜೀವಿನಿ ಯೋಜನೆಯಲ್ಲಿ ಲಕ್ಷಾಂತರ ರೂ. ಗೋಲ್‌ಮಾಲ್; ಜಿ.ಪಂ. ಸಿಇಒ ನಿರ್ಲಕ್ಷ್ಯ :   ಮಹಿಳಾ ಆಯೋಗಕ್ಕೆ ದೂರು ನೀಡಿರುವ  ಮಹಿಳೆಯರು

ಮಂಡ್ಯ : ಮದ್ದೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಕೆಲವು ಸಂಜೀವಿನಿ ಒಕ್ಕೂಟಗಳಲ್ಲಿ ಬೃಹತ್ ಅನುದಾನ ದುರ್ಬಳಕೆಯಾಗಿರುವ ಬಗ್ಗೆ ಮಂಡ್ಯ ಜಿಲ್ಲಾ ಪಂಚಾಯತಿ ಸಿಇಓ ರವರಿಗೆ ದೂರು ನೀಡಿದ್ದು,ಅವರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು  ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಅವರಿಗೆ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನೊಂದ ಗ್ರಾಮೀಣ ಮಹಿಳೆಯರು ಮಹಿಳಾ ಆಯೋಗದ ಅಧ್ಯಕ್ಷೆಯಾದ ನಾಗಲಕ್ಷ್ಮಿ ಚೌದರಿ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೂರು ಸಲ್ಲಿಸಿ ನ್ಯಾಯ ಒದಗಿಸುವಂತೆ ಮೊರೆ ಹೋಗಿದ್ದಾರೆ.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಮದ್ದೂರು ತಾಲೂಕಿನ ಸಂಜೀವಿನಿ ಒಕ್ಕೂಟಗಳಿಗೆ ಬಿಡುಗಡೆಯಾದ ಸಮುದಾಯ ಬಂಡವಾಳ ನಿಧಿ, ಎಂಸಿಎಲ್‌ಎಫ್ ಹಾಗೂ ತರಬೇತಿ ಅನುದಾನಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು, ಎಂ.ಬಿ.ಕೆ.ಗಳು, ಅಮೃತ್ ಹಾಗೂ ಕಂಪ್ಯೂಟರ್ ಆಪರೇಟರ್‌ಗಳು ಸೇರಿಕೊಂಡು ಲೂಟಿ ಮಾಡಿದ್ದಾರೆ ಎಂಬುವುದು ಪ್ರಮುಖ ಆರೋಪವಾಗಿದೆ. ಒಕ್ಕೂಟದ ಮಹಿಳಾ ಪದಾಧಿಕಾರಿಗಳಾದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಅರಿವಿಗೆ ಬಾರದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಖಾಲಿ ಚೆಕ್‌ಗಳಿಗೆ ಸಹಿ ಪಡೆದು ಅಪಾರ ಪ್ರಮಾಣದ ಹಣವನ್ನು ಡ್ರಾ ಮಾಡಲಾಗಿದೆ. ಜೊತೆಗೆ ಸ್ವಸಹಾಯ ಸಂಘಗಳಿಗೆ ಬಂದ ಸಮುದಾಯ ಬಂಡವಾಳ ನಿಧಿಯನ್ನು ನೀಡಲು ಪ್ರತಿ ಗುಂಪು ಗಳಿಂದಲೂ ಕಮಿಷನ್ ರೂಪದಲ್ಲಿ ಹಣ ವಸೂಲಿ ಮಾಡಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಈ ಬೃಹತ್ ಅವ್ಯವಹಾರದ ಕುರಿತು ಸೂಕ್ತ ದಾಖಲೆಗಳೊಂದಿಗೆ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ರವರಿಗೆ ಮಾರ್ಚ್ 02 ರಂದು ಮಹಿಳೆಯರು ದೂರುಗಳನ್ನು ಸಲ್ಲಿಸಿದ್ದರು. ಆದರೆ, ಈವರೆಗೆ ತಪ್ಪಿತಸ್ಥರ ವಿರುದ್ಧ ಯಾವುದೇ ಜಿಲ್ಲಾ ಮಟ್ಟದ ತನಿಖೆ ನಡೆಸಿಲ್ಲ. ಬದಲಾಗಿ, ಯಾವ ತಾಲೂಕು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಭ್ರಷ್ಟಾಚಾರದ ದೂರು ನೀಡಲಾಗಿತ್ತೋ, ಅವರಿಗೆ ದೂರಿನ ಅರ್ಜಿಗಳನ್ನು ಮರಳಿ ಅದೇ ಅಧಿಕಾರಿಗಳಿಗೇ ತನಿಖೆ ಮಾಡಲು ಜಿಲ್ಲಾ ಪಂಚಾಯಿತಿ ಸಿಇಒ ವರ್ಗಾವಣೆ ಮಾಡಿದ್ದಾರೆ.
“ಆರೋಪಿಗಳಿಗೇ ತಮ್ಮ ಮೇಲಿನ ಆರೋಪಗಳನ್ನು ತನಿಖೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಸಂಪೂರ್ಣ ನಿಯಮಬಾಹಿರ ಹಾಗೂ ಅನ್ಯಾಯದ ಪರಮಾವಧಿ” ಎಂದು ಒಕ್ಕೂಟದ ಸದಸ್ಯರು ತಮ್ಮ ಅಸಹಾಯಕತೆ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ನ್ಯಾಯ ಸಿಗುವ ಭರವಸೆ ಕಳೆದುಕೊಂಡ ನೀಡಘಟ್ಟ, ನಗರಕೆರೆ, ವಳಗೆರೆಹಳ್ಳಿ, ಕೆ. ಬೆಳ್ಳೂರು, ಹೆಮ್ಮನಹಳ್ಳಿ, ಸೋಮನಹಳ್ಳಿ, ಗೊರವನಹಳ್ಳಿ ಸೇರಿದಂತೆ ಸುಮಾರು 10  ಪಂಚಾಯಿತಿಗಳ ಸಂಜೀವಿನಿ ಜಿಪಿಎಲ್‌ಎಫ್ ಪದಾಧಿಕಾರಿಗಳು ಹಾಗೂ ಸದಸ್ಯರು, ಮಂಡ್ಯದಲ್ಲಿ  ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿಯವರನ್ನು ಖುದ್ದಾಗಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಗ್ರಾಮೀಣ ಮಹಿಳೆಯರ ಹಣಕಾಸು ಸಬಲೀಕರಣಕ್ಕಾಗಿ ಸರ್ಕಾರ ನೀಡುವ ಹಣಕಾಸನ್ನು ದೋಚುತ್ತಿರುವ ಭ್ರಷ್ಟ ಅಧಿಕಾರಿಗಳ ಎದುರಾಗಿ ಆಯೋಗ ಮಧ್ಯಪ್ರವೇಶಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಮಹಿಳೆಯರು ಆಗ್ರಹಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಿಇಒ ಅವರಿಂದಲೇ ನಿರ್ಲಕ್ಷ್ಯಕ್ಕೊಳಗಾದ ಈ ಪ್ರಕರಣದಲ್ಲಿ, ಇದೀಗ ರಾಜ್ಯ ಮಹಿಳಾ ಆಯೋಗದ ಪ್ರವೇಶದ ನಂತರವಾದರೂ ವಂಚಕ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!