Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಜಾತಿ ಸಮೀಕ್ಷೆಯಲ್ಲಿ ನಿಖರವಾದ ಮಾಹಿತಿ ನೀಡಿ ; ಚುಂಚಶ್ರೀ

ಸಂವಿಧಾನದತ್ತವಾದ ವ್ಯವಸ್ಥೆಗೆ ನಿಖರವಾದ ವಿವರಗಳನ್ನು ನೀಡಿ, ಸರ್ಕಾರ ಕೈಗೊಂಡಿರುವ ಜಾತಿ ಸಮೀಕ್ಷೆಗೆ ಸಹಕರಿಸಬೇಕು ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಮಂಡ್ಯ ನಗರದ ಸ್ವರ್ಣಸಂದ್ರ ಬಳಿ ಇರುವ ಬಿ.ಜಿ.ಎಸ್. ಭವನದಲ್ಲಿ ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

2013-14ರಲ್ಲಿ ನಡೆದ ಜಾತಿ ಸಮೀಕ್ಷೆ ಸಮರ್ಪಕ ವಾಗಿ ನಡೆದಿಲ್ಲ. ಶೇ.30 ರಿಂದ ಶೇ.40ರಷ್ಟು ಸಮಿ ಕ್ಷೆ ನಡೆದಿಲ್ಲ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರು ಸಮೀಕ್ಷೆಗೆ ಆದೇಶ ಮಾಡಿದೆ. ಹೀಗಾಗಿ ಇಂದು ಪ್ರತಿಯೊಂದು ಸಮುದಾಯಕ್ಕೂ ಮಠಗಳಿವೆ, ಮಠಾಧೀಶರಿದ್ದಾರೆ, ನಾಯಕರಿದ್ದಾರೆ, ಸಂಘಗಳಿವೆ. ಅವರೆಲ್ಲರೂ ತಮ್ಮ ತಮ್ಮ ಸಮುದಾಯದ ಜನರಲ್ಲಿ ಅರಿವು, ಜಾಗೃತಿ ಮೂಡಿಸಿ ಪ್ರತಿಯೊಬ್ಬರನ್ನೂ ಈ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಮಾಡಿ ಸಂವಿಧಾನ ಉಳಿಸುವ ಕೆಲಸ ಮಾಡುವುದು ಅವಶ್ಯಕವಾಗಿದೆ ಎಂದರು.
1931ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್‌ಆಯೋಗವನ್ನು ರಚಿಸಿ ಜಾತಿ ಸಮೀಕ್ಷೆಯನ್ನು ನಡೆಸಿದ್ದರು. ಅದಾದ 80 ವರ್ಷಗಳ ಬಳಿಕರಾಜ್ಯ ಸರ್ಕಾರ ಜಾತಿ ಸಮೀಕ್ಷೆ ಕೈಗೊಂಡಿದ್ದರೂ ಅದು ಯಾರಿಗೂ ಸರ್ವಸಮ್ಮತವಾಗಿ ಕಂಡುಬರದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜಾತಿ ಗಣತಿ ಮಾಡಲಾ ಗುತ್ತಿದೆ. ಈಗಲಾದರೂ ಪ್ರತಿ ಸಮುದಾಯದವರು ಸರಿಯಾದ ವಿವರಗಳನ್ನು ಕೊಟ್ಟರೆ ಮೀಸಲಾತಿ ಪ್ರಮಾಣ, ಜಾತಿವಾರು ಪ್ರಾಧಾನ್ಯತೆ ದೊರಕಲಿದೆ ಎಂದರು.

ವಿಶ್ವ ಒಕ್ಕಲಿಗರ ಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಜಾತಿ ಗಣತಿ ವೇಳೆ ಸಂಖ್ಯಾಬಲ ಕಡಿಮೆಯಾದರೆ,ಮೀಸಲಾತಿ ನೀತಿ ನಿರೂಪಣೆ ಮಾಡಲು, ಜಾತಿವಾರು ಪ್ರಾತಿನಿಧ್ಯ ನೀಡಲು, ರಾಜಕೀಯ ಪ್ರಾತಿನಿಧ್ಯ ನೀಡುವುದಕ್ಕೂ ಜಾತಿಯ ಸಂಖ್ಯಾ ಬಲವನ್ನು ಪರಿಗಣಿಸಲಾಗುತ್ತದೆ. ಆರ್ಥಿಕ, ಔದ್ಯೋಗಿಕವಾಗಿ ಮೀಸಲಾತಿ ನೀಡುವುದರಿಂದ ಜಾತಿ ಗಣತಿ ಸ್ಪಷ್ಟವಾಗಿ, ಸಂಖ್ಯಾಬಲ ಸ್ಪಷ್ಟವಾಗಿ ನಮೂದಾಗಬೇಕು ಎಂದು ನುಡಿದರು.

ಜಾತಿ ಸಂಖ್ಯೆ ಕಡಿಮೆಯಾದರೆ ನಮ್ಮನ್ನು ಕೊನೆಗೆ ದೂಡುವರು, ಸೌಲಭ್ಯಗಳ ಪ್ರಮಾಣ ಕಡಿಮೆಯಾಗಲಿದೆ. ಆ ನಿಟ್ಟಿನಲ್ಲಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಸೆ.22 ರಿಂದ ಅ.7ರವರೆಗೆ ನಡೆಯುವ ನಾಯಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಮೀ ಕ್ಷೆಯ ವೇಳೆ ಪ್ರತಿಯೊಂದು ಗ್ರಾಮ, ಮನೆ ಮನೆಗೆ ತೆರಳಿ ಸಮುದಾಯದ ಜನರು ಭಾಗವಹಿಸುವಂತೆ ಮಾಡಬೇಕು ಎಂದು ಸೂಚಿಸಿದರು.
ಸಮಾರಂಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಅಶೋಕ್‌ ಜಯರಾಂ, ನೆಲ್ಲಿಗೆರೆ ಬಾಲು,  ಮೂಡ್ಯ ಚಂದ್ರು, ರಾಘವೇಂದ್ರ, ನೇಗಿಲಯೋಗಿ ಒಕ್ಕಲಿಗರ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ತಿಮ್ಮೇಗೌಡ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!