
ಮಂಡ್ಯ : ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕದ 3 ವರ್ಷಗಳ ಅವಧಿಯ ಆಡಳಿತ ಮಂಡಳಿಯ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾಗಿ ಕೆ ದೇವೇಗೌಡ, ಉಪಾಧ್ಯಕ್ಷರಾಗಿ ವಿನೋದ್, ಮಹಿಳಾ ಉಪಾಧ್ಯಕ್ಷರಾಗಿ ಮಂಜಮ್ಮ, ರಾಜ್ಯ ಪರಿಷತ್ ಸ್ಥಾನಕ್ಕೆ ಸಿ ರುದ್ರಯ್ಯ ಚುನಾಯಿತರಾದರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಕೆ. ದೇವೇಗೌಡ, ಚುನಾವಣೆ ಗೆಲುವು ಸೋಲು ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಲಿ,ಎಲ್ಲರೂ ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿಗೆ ಶ್ರಮಿಸೋಣ, ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರ ಸಮಸ್ಯೆಗಳನ್ನು ಬಗೆಹರಿಸೋಣ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯಿಂದ ಒಟ್ಟು ಒಂಬತ್ತು ಮಂದಿ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. 5 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು.ಇಂದು 4 ಸ್ಥಾನಗಳಿಗೆ ಚುನಾವಣೆಯು ಯಶಸ್ವಿಯಾಗಿ ನಡೆದು ,ಒಟ್ಟಾರೆ ನಮ್ಮ ತಂಡದ ಸದಸ್ಯರು ಎಲ್ಲಾ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಹಕಾರ ನೀಡಿದ ಎಲ್ಲರಿಗೂ ಈ ಗೆಲುವನ್ನು ಸಮರ್ಪಿಸುತ್ತೇವೆ ಎಂದು ಹೇಳಿದರು.
ಚುನಾವಣೆಯಲ್ಲಿ ಸೋಲು ಅನುಭವಿಸಿದ ನಮ್ಮ ಗೆಳೆಯರನ್ನು ಕೂಡ ಅಭಿನಂದಿಸುತ್ತೇವೆ. ಮುಂದಿನ ದಿನಗಳಲ್ಲಿ ಅವರೊಟ್ಟಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಮನವಿ ಮಾಡಿದರು.
ಚುನಾವಣಾಧಿಕಾರಿಯಾಗಿ ಶಿಶು ಯೋಜನಾ ಅಭಿವೃದ್ದಿ ಅಧಿಕಾರಿ ಕುಮಾರಸ್ವಾಮಿ ಕರ್ತವ್ಯ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಪ್ರಶಾಂತ್ ಬಾಬು, ರಫೀಕ್, ಮಂಜುನಾಥ್ ಸೇರಿದಂತೆ ಸಂಘದ ಸದಸ್ಯರು ಹಾಗೂ ಮತ್ತಿತರರು ಇದ್ದರು.

Leave a Reply