
ಮಂಡ್ಯ ನಗರದ ರೈತ ಸಭಾಂಗಣದ ನವೀಕರಣಕ್ಕೆ ಲೋಕಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 4.28 ಕೋಟಿ ರೂ.ಅನುದಾನ ನೀಡುವುದಾಗಿ ಹೇಳಿದ್ದರು. ಅದರಂತೆ ಇದೀಗ ಮೊದಲ ಹಂತವಾಗಿ 1.70 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಕೆಲಸವನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ ಎಂದು ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಯು.ಸಿ.ಶೇಖರ್ ತಿಳಿಸಿದರು.
ನಗರದ ರೈತ ಸಭಾಂಗಣದ ಆವರಣದಲ್ಲಿ ನಡೆದ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 54ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನವೀಕರಣ ಕಾಮಗಾರಿಯ ಕೆಲಸವನ್ನು ಗುಣಮಟ್ಟದಿಂದ ಮಾಡಿಸಲು ನಾವು ನೀವು ಎಲ್ಲರೂ ನೋಡಿಕೊಳ್ಳಬೇಕು ಎಂದು ಹೇಳಿದರು.
ಇನ್ನು ಹೆಚ್ಚಿನ ಅನುದಾನ ಬೇಕಾದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಂಡ್ಯ ಶಾಸಕ ರವಿಕುಮಾರ್ ಅವರು ಕೊಡುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಸಂಘದಲ್ಲಿ ವರ್ಕ್ ಶಾಪ್ ನಷ್ಟದಲ್ಲಿದ್ದು, ಸೀಮೆಎಣ್ಣೆ ವಿಭಾಗ ಒಂದು ಹಂತಕ್ಕೆ ಬರುತ್ತಿದೆ ಎಂದರು.
ಮರಣ ನಿಧಿಯನ್ನು 10 ಸಾವಿರ ರೂ.ಗಳಿಗೆ ಉಳಿಸಿಕೊಳ್ಳಲಾಗಿದ್ದು, ಸಂಘದಲ್ಲಿ ಒಳ್ಳೆಯ ಆಡಳಿತ ನಡೆಸಲು ನಿಮ್ಮೆಲ್ಲರ ಸಲಹೆ ಸಹಕಾರ ಇರಲಿ ಎಂದ ಅವರು ಸಂಘದಲ್ಲಿ ರೈತರಿಗೆ ಅನುಕೂಲವಾಗುವಂತೆ ಔಷಧಿ ಅಂಗಡಿ ಮತ್ತು ಬಿತ್ತನೆ ಬೀಜ ಮಾರಾಟ ಮಾಡಲು ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜೆ.ಪಿ.ಮಹೇಶ್, ನಿರ್ದೇಶಕರಾದ ಬೇಲೂರು ಸೋಮಶೇಖರ್, ಕೆ.ಸಿ.ರವೀಂದ್ರ, ಎನ್.ಪುನೀತ್, ಎಚ್ಎಸ್ ಯೋಗೇಶ್ ಕುಮಾರ್, ಜಿ.ಎನ್. ಉದಯ್ ಕುಮಾರ್, ಸಿ.ಕೆ. ಪಾಪಯ್ಯ, ಎಂಪಿ ಶ್ರೀಧರ್, ಕೆ. ಹೇಮಲತಾ, ಜಿ.ಎಸ್.ಅಂಜನಾ, ಬಿ. ಚಂದ್ರ, ಎಂಡಿಸಿಸಿ ಬ್ಯಾಂಕ್ ನಾಮ ನಿರ್ದೇಶಕ ಹೆಚ್.ಅಶೋಕ್, ವ್ಯವಸ್ಥಾಪಕ ನಿರ್ದೇಶಕ ಹೆಚ್.ಆರ್. ನಾಗಭೂಷಣ್, ಜನರಲ್ ಮೆನೇಜರ್ ಬಿ.ಆರ್. ಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply