
ಜಿಲ್ಲಾಡಳಿತ , ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ ಹಿನ್ನಲೆ ಮಂಡ್ಯದಲ್ಲಿ ಬೃಹತ್ ಕಾಲ್ನಡಿಗೆ ಜಾಥಾವು ಮಂಡ್ಯ RTO ಕಚೇರಿಯಿಂದ ಸಂಜಯ್ ವೃತ್ತದ ವರೆಗೆ ನಡೆಯಿತು.
ಜಿಲ್ಲಾಧಿಕಾರಿ ಡಾ. ಕುಮಾರ ಅವರು ಕಾಲ್ನಡಿಗೆಗೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು , ಜೀವ ಎನ್ನುವುದು ಬಹಳ ಅಮೂಲ್ಯವಾದಂತದ್ದು ನಮ್ಮ ಹಾಗೂ ಎದುರು ಸಂಚರಿಸುವವರ ಜೀವವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿರುತ್ತದೆ. ರಸ್ತೆಯಲ್ಲಿ ಸಂಚಾರಿಸುವ ಪ್ರತಿಯೊಬ್ಬ ವ್ಯಕ್ತಿಯು ಸಂಚಾರದ ನಿಯಮವನ್ನು ತಿಳಿದುಕೊಂಡು ಸುರಕ್ಷಿತವಾಗಿರಬೇಕು ಎನ್ನುವುದು ಈ ಕಾಲ್ನಡಿಗೆ ಪ್ರಮುಖ ಉದ್ದೇಶವಾಗಿದೆ ಎಂದರು.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ , ಇತ್ತೀಚಿನ ದಿನಗಳಲ್ಲಿ ಚಾಲಕರು ರಸ್ತೆಯಲ್ಲಿ ಸಂಚಾರಿಸುವಾಗ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದಿದೆ. ಅಡ್ಡ ದಿಡ್ಡಿಯಾಗಿ ನಿರ್ಲಕ್ಷತನದಿಂದ ವಾಹನ ಚಲಿಸುವುದರಿಂದ ನಿಮ್ಮ ಪ್ರಾಣದ ಜೊತೆಗೆ ಮತ್ತೊಬ್ಬರ ಪ್ರಾಣಕ್ಕೂ ಹಾನಿಯುಂಟಾಗುತ್ತದೆ ಸಂಚಾರದ ನಿಯಮದ ಬಗ್ಗೆ ಅರಿವು ಮೂಡಿಸಿಕೊಳ್ಳಿ ಎಂದು ಚಾಲಕರಿಗೆ ಕಿವಿಮಾತು ಹೇಳಿದರು.
ಕಾಲ್ನಡಿಗೆಯು ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಿಂದ ಪ್ರಾರಂಭವಾಗಿ ಜಾಗೃತಿ ಘೋಷಣೆ ಕೂಗುತ್ತ ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ, ಎಂ. ಸಿ ರಸ್ತೆ ಮೂಲಕ ನಗರದ ಸಂಧ್ಯಾ ವೃತ್ತದಲ್ಲಿ ಮಾನವ ಸರಪಳಿಯನ್ನು ರಚಿಸಿ ನಂತರ ಆರ್. ಪಿ ರಸ್ತೆ, ನೂರಡಿ ರಸ್ತೆ, ಮೂಲಕ ಪ್ರಾದೇಶಿಕ ಸಾರಿಗೆ ಇಲಾಖೆಗೆ ತಲುಪಿತು.
ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಶ್ರೀಧರ್ ಕೆ. ಮಲ್ಲಾಡ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಹೇಮಾವತಿ ಟಿ. ಜಿ ಪ್ರಾದೇಶಿಕ ಸಾರಿಗೆ ಇಲಾಖೆಯ ನೀವೃತ್ತ ಅಧಿಕ್ಷಕರಾದ ಪ್ರಸಾದ್, ಜಿಲ್ಲಾ ರಸ್ತೆ ಸುರಕ್ಷಾತ ಸಮಿತಿ ಕಾರ್ಯದರ್ಶಿಗಳಾದ ಹರ್ಷ ಹೆಚ್. ಆರ್ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಸ್. ಪಿ ನಾಗರಾಜು ಅವರು ಉಪಸ್ಥಿತರಿದ್ದರು.

Leave a Reply