
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20,21,22 ರಂದು ಒಟ್ಟು 3 ದಿನಗಳ ಕಾಲ ನಡೆಯಲಿದ್ದು, ಸಮ್ಮೇಳನದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಬಿ.ಸಿ.ಶಿವಾನಂದಮೂರ್ತಿ ಅವರು ಕರೆಕೊಟ್ಟರು.
ಅವರು ಅಂಬೇಡ್ಕರ್ ಭವನದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಸಮ್ಮೇಳನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂಬ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಸಾರ್ವಜನಿಕರನ್ನು ಕರೆತರುವ ಜವಾಬ್ದಾರಿಯನ್ನು ಆಯಾ ಪಿಡಿಒ ಗಳಿಗೆ ವಹಿಸಲಾಗುತ್ತದೆ. ಜೊತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯ ಕರ್ತೆಯರು ಕರೆತರಬೇಕು ಎಂದರು.
ಸಾರ್ವಜನಿಕರು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಗೆ 1 ಬಸ್ ನೇಮಿಸಲಾಗುತ್ತದೆ. ಬಸ್ ವ್ಯವಸ್ಥೆಯ ಜವಾಬ್ದಾರಿ ಸಂಪೂರ್ಣವಾಗಿ ಕೆಎಸ್ ಆರ್ ಟಿ ಸಿ ವಿಭಾಗದವರಾಗಿರುತ್ತದೆ. ಪ್ರತಿ ಬಸ್ ನಲ್ಲಿ ಕಡ್ಡಾಯವಾಗಿ ಕುಡಿಯುವ ನೀರಿನ ಕ್ಯಾನ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಗ್ಲೂಕೋಸ್, ಒ ಆರ್ ಎಸ್ ಪೌಡರ್, ಚಾಕ್ಲೆಟ್, ಬಿಸ್ಕೆಟ್ ನ ವ್ಯವಸ್ಥೆಯನ್ನು ಆಯಾ ಪಿಡಿಒ ಗಳು ಕಲ್ಪಿಸಬೇಕು. ಸಮ್ಮೇಳನದಲ್ಲಿ ಪ್ರತಿಯೊಬ್ಬರಿಗೂ ಉತ್ತಮ ತಿಂಡಿ ಹಾಗೂ ಊಟದ ವ್ಯವಸ್ಥೆ ಇದ್ದು ಎಲ್ಲರೂ ಆಹಾರವನ್ನು ಸೇವಿಸಬೇಕು ಎಂದರು.
ಶಾಲಾ ಮಕ್ಕಳನ್ನು ಸಮ್ಮೇಳನಕ್ಕೆ ಕರೆದುಕೊಂಡು ಬರುವ ಹಾಗೂ ವಾಪಸ್ಸು ಕರೆದುಕೊಂಡು ಹೋಗುವ ಜವಾಬ್ದಾರಿ ಶಿಕ್ಷಕರದ್ದಾಗಿರುತ್ತದೆ. ಎಲ್ಲರೂ ಇಂದಿನಿಂದಲೇ ಯೋಜನೆ ರೂಪಿಸಿಕೊಂಡು ಕಾರ್ಯ ನಿರ್ವಹಿಸಿ ಎಂದರು.
ಜಿಲ್ಲೆಯಲ್ಲಿರುವ ಇಒ, ಬಿಇಒ, ಸಿಡಿಪಿಒ, ಟಿಹೆಚ್ ಒ ಹಾಗೂ ತಹಶೀಲ್ದಾರ್ ರನ್ನೊಳಗೊಡಂತೆ ಸಭೆ ನಡೆಸಿ ಯೋಜನೆ ರೂಪಿಸಿಕೊಂಡು ಸಹಕಾರ ಮನೋಭಾವದಿಂದ ಕೆಲಸ ಮಾಡಿ. ಮಂಡ್ಯ ಜಿಲ್ಲೆಯು ಬಹಳ ಅಚ್ಚುಕಟ್ಟಾಗಿ ಸಮ್ಮೇಳನವನ್ನು ನಡೆಸಿದೆ ಎಂಬ ಕೀರ್ತಿ ಎಲ್ಲೆಡೆ ಪಸರಿಸುವಂತೆ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಕಾರಣಿಭೂತರಾಗೋಣ ಎಂದರು.
ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಸಂಚಾಲಕಿ ಡಾ. ಮೀರಾಶಿವಲಿಂಗಯ್ಯ ಅವರು ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನವು ಬಹಳ ಅಪರೂಪದ ಕಾರ್ಯಕ್ರಮವಾಗಿದೆ. ಸರ್ಕಾರ, ಜಿಲ್ಲಾಡಳಿತ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲೆಯವರೆಲ್ಲ ಒಟ್ಟಿಗೆ ಸೇರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿದ್ದೇವೆ. ಪ್ರತಿಯೊಬ್ಬರು ಸಮ್ಮೇಳನಕ್ಕೆ ಬಹಳ ಉತ್ಸಾಹದಿಂದ ಭಾಗವಹಿಸಬೇಕು. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರತಿಯೊಬ್ಬರಿಗೂ ತಿಳಿಯಬೇಕು ಎಂಬ ಉದ್ದೇಶದಿಂದ ಶಾಲಾ ಹಾಗೂ ಕಾಲೇಜಿನಲ್ಲಿ ರಸಪ್ರಶ್ನೆ ಸ್ಪರ್ಧೆ ಹಾಗೂ ಕನ್ನಡಕ್ಕಾಗಿ ಓಟ ಮ್ಯಾರಥಾನ್ ಸ್ಪರ್ಧೆಯನ್ನು ಎಲ್ಲಾ ವಯಸ್ಸಿನವರಿಗೂ ನಡೆಸುತ್ತಿದ್ದೇವೆ. ಮ್ಯಾರಥಾನ್ ಓಟದಲ್ಲಿ ಎಲ್ಲರೂ ಭಾಗವಹಿಸಿ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರೂ ಸವಿಯುವಂತಾಗಲಿ ಎಂದರು.
ಸಭೆಯಲ್ಲಿ ಕೆ ಎಸ್ ಆರ್ ಟಿ ಸಿ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳಾದ ಪಣ್ಣೆದೊಡ್ಡಿ ಹರ್ಷ, ಡಾ ಹುಸ್ಕೂರು ಕೃಷ್ಣೆಗೌಡ, ಹೊಳಲು ಶ್ರೀಧರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್ ಶಿವರಾಮೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ ಎಂ ಎನ್ ಆಶಾಲತಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply