
ಮಂಡ್ಯ: ಮುಂದಿನ ದಿನಗಳಲ್ಲಿ ಮಹಿಳೆಯರಲ್ಲಿ ಮುಟ್ಟಿನ ಕಪ್ ಬಳಕೆ ಹೆಚ್ಚಾಗಬೇಕಿದೆ ಎಂದು ಮಿಮ್ಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ. ಮನೋಹರ್ ಹೇಳಿದರು.
ಮಂಡ್ಯ ತಾಲೂಕಿನ ಗೊರವಾಲೆ ಸರ್ಕಾರಿ ಶಾಲೆ ಆವರಣದಲ್ಲಿ ಶಿವಳ್ಳಿ ಗ್ರಾಮಪಂಚಾಯಿತಿ ಕಾರ್ಯಾಲಯ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ಹಾಗೂ ಮಹಿಳೆಯರಿಗಾಗಿ ವಿಶೇಷ ಆರೋಗ್ಯ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದಲಾದ ಜೀವನ ಶೈಲಿ ಮತ್ತು ಆಹಾರ ಪದಾರ್ಧಗಳಿಂದ ಹಾಗೂ ಫಾಸ್ಟ್ ಮತ್ತು ಜಂಕ್ಫುಡ್ ಸೇವನೆಯಿಂದ ಮಹಿಳೆಯರಲ್ಲಿ ಋತುಚಕ್ತ ಏರುಪೇರಾಗುತ್ತಿದೆ, ಚಿಕ್ಕವಯಸ್ಸಿನ ಹೆಣ್ಣುಮಕ್ಕಳು ಬಹುಬೇಗನೇ ಋತುಮತಿಯಾಗುತ್ತಿದ್ದಾರೆ ಎಂದು ಎಚ್ಚರಿಸಿದರು.
ಮಹಿಳೆಯರಲ್ಲಿ ಮುಟ್ಟು ಅಥವಾ ಋತುಚಕ್ರ ಪ್ರಕೃತಿಯ ಸಹಜ ಕ್ರಿಯೆಯಾಗಿದೆ, ಸ್ವ ಸ್ವಚ್ಛತೆಯಿಂದ ಆರೋಗ್ಯ ರಕ್ಷಿಸಿಕೊಳ್ಳಬೇಕು, ಹದಿಹರೆಯದ ಹೆಣ್ಣುಮಕ್ಕಳು ಋತುಚಕ್ರದ ಸಮಯದಲ್ಲಿ ತಾಯಿಯ ಪೋಷಣೆಯಲ್ಲಿರುತ್ತಾರೆ, ಸ್ವಸ್ವಚ್ಛತೆಯಿಂದ ಆರೋಗ್ಯ ನೋಡಿಕೊಳ್ಳುವುದು ಉತ್ತಮ ಎಂದರು.
ಮಹಿಳಾ ಸಬಲೀಕರಣ ಹೆಚ್ಚಾದಂತೆಲ್ಲಾ ಮಹಿಳೆಯರ ಆರೋಗ್ಯ ಕಾಳಜಿ ಹೆಚ್ಚಾಗುತ್ತಿದೆ, ಋತುಚಕ್ರದ ದಿನಗಳಲ್ಲಿ ಬಟ್ಟೆ, ಸ್ಯಾನಿಟರಿ ಪ್ಯಾಡ್ ಬಳಕೆ ಕಡಿಮೆ ಮಾಡಿ, ಮುಟ್ಟಿನ ಕಪ್ಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವುದು ಉತ್ತಮವಾಗಿದೆ ಎಂದರು.
ಸ್ಯಾನಿಟರಿ ಪ್ಯಾಡ್ಗಳಲ್ಲಿ ಪ್ಲಾಸ್ಟಿಕ್ ಹೆಚ್ಚಿದ್ದು, ಕ್ಯಾನ್ಸರ್ ಕಾರಕ ಪ್ರಕರಣಗಳು ಹೆಚ್ಚಾಗುತ್ತಿವೆ, ಇವುಗಳನ್ನು ಬಳಕೆ ಮಾಡುವುದನ್ನು ನಿಲ್ಲಿಸಿ, ಕಡಿಮೆ ದುಡ್ದಿನ ಕಪ್ಗಳನ್ನು ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ ಎಂದ ಅವರು ಇಂದು ಗ್ರಾಮಪಂಚಾಯಿತಿಯಿಂದ ಉಚಿತವಾಗಿ ಮುಟ್ಟಿನ ಕಪ್ ಗಳನ್ನು ವಿತರಣೆ ಮಾಡಲಾಗುತ್ತಿದ್ದು ಎಲ್ಲರೂ ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಪ್ರಸೂತಿ ಮತ್ತು ಸ್ತಿçÃರೋಗ ತಜ್ಞೆ ಡಾ.ಶಿಲ್ಪಶ್ರೀ, ಮಹಿಳೆಯರಿಗೆ ಮುಟ್ಟು ಪ್ರಕೃತಿಯ ವರವಾಗಿದ್ದು, ಇದರಿಂದಲೇ ಜನನ, ಇಂತಹ ಭಾಗ್ಯವನ್ನು ಪಡೆದ ಮಹಿಳೆಯರೇ ಧನ್ಯರು, ಸಂತಾನೋತ್ಪತ್ತಿಗೆ ಮೂಲಾಧರ ಮಹಿಳೆಯರಾಗಿದ್ದಾರೆ, ಅವರ ಆರೋಗ್ಯ ಮತ್ತು ಶಿಕ್ಷಣ ಬಹಳ ಮುಖ್ಯ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಅಂಶಗಳು ಕಾಣಿಸಿಕೊಳ್ಳುತ್ತಿವೆ, ಋತುಚಕ್ರ ದಿನಗಳಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್ಗಳಿಂದ ಕ್ಯಾನ್ಸರ್ ಬರುತ್ತಿದೆ ಎಂಬ ವರದಿ ಬಂದಿದೆ, ಆದ್ದರಿಂದ ಮುಟ್ಟಿನ ಕಪ್ಗಳನ್ನು ಬಳಕೆಯ ಬಗ್ಗೆ ಜಾಗೃತಿ ಹೆಚ್ಚಿಸಿಕೊಂಡು ಬಳಕೆ ಮಾಡಲು ಪ್ರಾರಂಭಿಸಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಹಿಳೆ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಲೈಂಗಿಕ ದೌರ್ಜನ್ಯ ತಡೆ, ಕಳ್ಳಸಾಗಾಣಿಕೆ,ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ, ಹೆಣ್ಣುಭ್ರೂಣಹತ್ಯೆ, ಕಾನೂನು ಅರಿವು, ಕೌಟುಂಬಿಕ ದೌರ್ಜನ್ಯ ತಡೆ ಹೀಗೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಂಡ್ಯ ತಾಲೂಕು ಪಂಚಾಯಿತಿ ಎಂ ಎಸ್ ವೀಣಾ,ಶಿವಳ್ಳಿ ಗ್ರಾ.ಪಂ.ಅಧ್ಯಕ್ಷೆ ಎಂ.ಸಿ.ಉಷಾ, ಉಪಾಧ್ಯಕ್ಷೆ ನವ್ಯಶ್ರೀ, ಪಿಡಿಓ ಶಿವಕುಮಾರ್, ಕಾರ್ಯದರ್ಶಿ ಪ್ರಕಾಶ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ.ಶೋಭಾರಾಣಿ, ಆರ್ಥಿಕ ಸಮಾಲೋಚಕಿ ಕೆ.ಪಿ.ಅರುಣಕುಮಾರಿ, ಗ್ರಾ.ಪಂ.ಸದಸ್ಯರುಗಳು ಮತ್ತು .ಮಾಜಿ ಅಧ್ಯಕ್ಷರು, ಸಿಬ್ಬಂದಿಗಳು ಹಾಜರಿದ್ದರು.

Leave a Reply