Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸಿದ್ದಗಂಗಾ ಶ್ರೀಗಳ ಜನ್ಮದಿನಾಚರಣೆ ಅಂಗವಾಗಿ ಅನ್ನದಾಸೋಹ

ಮದ್ದೂರು : ಕರ್ನಾಟಕ ರತ್ನ, ಪದ್ಮಭೂಷಣ, ನಡೆದಾಡಿದ ದೇವರು ಪರಮಪೂಜ್ಯ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿಯವರ 119ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಪಟ್ಟಣದಲ್ಲಿ ಆಚರಿಸಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಸಿದ್ದಗಂಗಾ ಶ್ರೀಗಳ ಭಕ್ತವೃಂದದ ವತಿಯಿಂದ ಲೀಲಾವತಿ ಬಡಾವಣೆಯ ಉದ್ಯಾನದ ಬಳಿ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಗಣ್ಯರು ನೂರಾರು ಮಂದಿ ಸಾರ್ವಜನಿಕರಿಗೆ ದಾಸೋಹ ವಿತರಿಸಿ ಭಕ್ತಿ ಸಮರ್ಪಣೆ ಮಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, 111 ವರ್ಷಗಳ ಕಾಲ ತ್ರಿವಿಧ ದಾಸೋಹ ನಡೆಸಿದ ಪೂಜ್ಯ ಸಿದ್ದಗಂಗಾ ಶ್ರೀಗಳು ಕೋಟ್ಯಾಂತರ ಭಕ್ತರ ಭಾವಕೋಶದಲ್ಲಿ ನೆಲೆಯಾಗಿರುವ ಮಹಾನ್ ಸಂತ ಎಂದರು.
ಯಾವುದೇ ಜಾತಿ, ಧರ್ಮ ಎನ್ನದೆ ಬಡವಿದ್ಯಾರ್ಥಿಗಳಿಗೆ ಶಿಕ್ಷಣ, ಅನ್ನ, ಆಸರೆಯನ್ನು ನೀಡಿ ಮನುಕುಲವನ್ನು ಉದ್ದರಿಸಿದ ಮಹಾನ್ ತಪಸ್ವಿಯಾಗಿದ್ದಾರೆ.

ಶತಾಯುಷಿ ಶ್ರೀಗಳ ಆದರ್ಶಮಯ ಬದುಕು ಇಂದಿನ ಸಮಾಜಕ್ಕೆ ಮಾರ್ಗದರ್ಶನವಾಗಬೇಕಿದೆ. ಬಸವಣ್ಣನವರ ಸಮಾನತೆಯ ಪರಿಕಲ್ಪನೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಜಾತ್ಯಾತೀತೆಯ ಪ್ರತೀಕ ಸಿದ್ದಗಂಗಾ ಮಠ ಎಂದು ಬಣ್ಣಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಶಿವಾನಂದ ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಾಸಭೆಯ ಮುಖಂಡರಾದ  ಮೆಣಸಗೆರೆ ಶಿವಲಿಂಗಯ್ಯ, ಮಹೇಶ್, ತೇಜಸ್, ಬಸವರಾಜ್, ಕೆಂಪಣ್ಣ, ಕೆಂಪರಾಜು, ಮರಲಿಂಗಪ್ಪ, ಮಹದೇವಸ್ವಾಮಿ, ಗುರುಮಲ್ಲೇಶ್, ಎಂ.ಸಿದ್ದರಾಮು, ಚಲುವರಾಜ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!