
ಮಂಡ್ಯ ಜಿಲ್ಲೆಯಲ್ಲಿ ಮಾಚ್೯21 ರಿಂದ ಏಪ್ರಿಲ್ 4 ರವರೆಗೆ ನಡೆಯಲಿರುವ ಎಸ್.ಎಸ್.ಎಲ್ ಸಿ ಪರೀಕ್ಷೆಗಳ ಕೆಲಸಗಳು ಯಾವುದೇ ಲೋಪವಿಲ್ಲದೆ ಪಾರದರ್ಶಕವಾಗಿ ನಡೆಸಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಮಾತನಾಡಿದರು.ಈ ಬಾರಿ ಒಟ್ಟು 20469 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಇವರಲ್ಲಿ 10661 ಗಂಡು ಮಕ್ಕಳು ಹಾಗೂ 9835 ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
62 ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ಮುಖ್ಯ ಶಿಕ್ಷಕರನ್ನು ಪರೀಕ್ಷಾ ಅಧೀಕ್ಷಕರನ್ನು ಹಾಗೂ ಪೇಪರ್ ಕಸ್ಟೋಡಿಯನ್ ಗಳನ್ನು , ಪ್ರತಿ ಬ್ಲಾಕ್ ಗೆ ಒಬ್ಬರೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಪೂರ್ಣ ಪರೀಕ್ಷೆ ವೆಬ್ ಕ್ಯಾಸ್ಟಿಂಗ್
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಲು ಪರೀಕ್ಷೆ ನಡೆಯುವ ಎಲ್ಲಾ ಕೊಠಡಿಗಳಿಗೆ ಸಿ.ಸಿ.ಟಿ.ವಿ ಅಳವಡಿಸಲಾಗುವುದು. ಪರೀಕ್ಷೆಯ ಚಲನ- ಕವನಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆಯಲಾಗುವ ಕಂಟ್ರೋಲ್ ರೂಂನಲ್ಲಿ ಅಧಿಕಾರಿಗಳನ್ನು ನೇಮಿಸಿ ವೀಕ್ಷಿಸಲಾಗುವುದು ಎಂದರು.
ಮೂಲಭೂತ ವ್ಯವಸ್ಥೆಗಳು ಯಾವುದೇ ವಿದ್ಯಾರ್ಥಿ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯಬಾರದು. ಪರೀಕ್ಷೆ ಅಚ್ಚುಕಟ್ಟಾಗಿ ನಡೆಸಲು ಉತ್ತಮ ಬೆಂಚ್ ಮತ್ತು ಡೆಸ್ಕ್ ಇರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಮಕ್ಕಳಿಗೆ ಕುಡಿಯುವ ನೀರು ಹಾಗೂ ಶೌಚಾಲಯಗಳ ವ್ಯವಸ್ಥೆ ಪರೀಕ್ಷಿಸಿಕೊಳ್ಳಿ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ಹಿನ್ನಲೆಯಲ್ಲಿ ಶಿಕ್ಷಕರು ಸಹ ಮೊಬೈಲ್ ನ್ನು ಪರೀಕ್ಷಾ ಕೊಠಡಿಗಳಿಗೆ ತೆಗೆದುಕೊಂಡು ಹೋಗಬಾರದು ಎಂದರು.
ಪರೀಕ್ಷೆ ನಡೆಯುವ ದಿನದಂದು
ಕೆ.ಎಸ್.ಆರ್.ಟಿ.ಸಿ ಬಸ್ ಗಳು ಸರಿಯಾದ ಸಮಯದಲ್ಲಿ ನಿಗದಿಪಡಿಸಿರುವ ರೀತಿ ಟ್ರಿಪ್ ಗಳಲ್ಲಿ ಸಂಚರಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರು.
ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ, ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಇರುವುದಿಲ್ಲ. ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು. ಈ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಯುವ ದಿನಗಳಂದು ಜೆರಾಕ್ಸ್ ಅಂಗಡಿಗಳು ಹಾಗೂ ಸೈಬರ್ ಸೆಂಟರ್ ಗಳು ತೆರೆಯಲು ಅವಕಾಶವಿರುವುದಿಲ್ಲ ಎಂದರು.
ಆರೋಗ್ಯ ಇಲಾಖೆ ಅವರು ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಸಿಬ್ಬಂದಿಗಳನ್ನು ನೇಮಕ ಮಾಡಿ ಅಗತ್ಯ ಔಷಧಿಗಳು ಹಾಗೂ ಒ.ಆರ್. ಎಸ್ ಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ವಿದ್ಯಾರ್ಥಿಗಳೊಂದಿಗೆ ಮುಖ್ಯ ಶಿಕ್ಷಕರು ಸಂಪರ್ಕದಲ್ಲಿದ್ದು, ಅವರಲ್ಲಿ ಪರೀಕ್ಷೆಯ ಬಗ್ಗೆ ಯಾವುದೇ ಭಯ ಬೇಡ. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಸಜ್ಜುಗೊಳಿಸಿ. ಯಾವುದಾದರೂ ಪರೀಕ್ಷಾ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಗೊಂದಲ ಇದ್ದರೆ ಪರಿಹರಿಸಿ ಎಂದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ ಸ್ವಾಮಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಮೇಗೌಡ, ಡಯಟ್ ಪ್ರಾಂಶುಪಾಲ ಪುರುಷೋತ್ತಮ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply