
ಮಂಡ್ಯ ತಾಲೂಕಿನ ತಗ್ಗಹಳ್ಳಿ ಪಂಚಾಯ್ತಿಗೆ ಪ್ರಭಾರಿಯಾಗಿ ಬಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮೂರೇ ದಿನದಲ್ಲಿ 54 ಲಕ್ಷಕ್ಕೂ ಹೆಚ್ಚು ಹಣವನ್ನು ಅಕ್ರಮವಾಗಿ ಪಾವತಿಸಿರುವುದು ಬೆಳಕಿಗೆ ಬಂದಿದೆ.
ತಗ್ಗಹಳ್ಳಿ ಪಿಡಿಒ ಎಚ್.ಎಸ್.ಲಕ್ಷ್ಮೀ ಅವರು 16 ದಿನಗಳ ಕಾಲ ರಜೆಯ ಮೇಲೆ ತೆರಳಿದ್ದ ಹಿನ್ನೆಲೆಯಲ್ಲಿ ಮಂಡ್ಯ ತಾಲೂಕು ಆಲಕೆರೆ ಗ್ರಾಪಂ ಪಿಡಿಒ ಶ್ರೀನಿವಾಸಯ್ಯ ಎಂಬುವರನ್ನು ತಗ್ಗಹಳ್ಳಿ ಪಂಚಾಯ್ತಿ ಪಿಡಿಒ ಹುದ್ದೆಯನ್ನು ಪ್ರಭಾರಿಯಾಗಿ ನೀಡಲಾಗಿತ್ತು. ಪ್ರಭಾರ ಹುದ್ದೆ ವಹಿಸಿಕೊಂಡ ನಂತರ ಮೂರೇ ದಿನದಲ್ಲಿ 48 ಲಕ್ಷ ರು. ಹಣವನ್ನು ಆನ್ಲೈನ್ ಪಾವತಿ, 4 ಲಕ್ಷ ರು. ಹಣವನ್ನು ಚೆಕ್ ಹಾಗೂ ತಗ್ಗಹಳ್ಳಿ ಗ್ರಾಮೀಣ ಬ್ಯಾಂಕ್ಗೆ ಒಂದೂವರೆ ಲಕ್ಷ ರು. ಹಣವನ್ನು ಪಾವತಿಸಿರುವುದು ಕಂಡುಬಂದಿದೆ.
ಊರಿನ ಗ್ರಾಮಸ್ಥರಿಗೆ ಈ ವಿಷಯ ತಿಳಿದು ತಕ್ಷಣವೇ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್.ನಂದಿನಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಲೋಕೇಶ್ ಅವರ ಗಮನಕ್ಕೆ ತಂದರು. ತಕ್ಷಣವೇ ಕಾ ರ್ಯೋನ್ಮುಖರಾದ ಅಧಿಕಾರಿಗಳು ತಗ್ಗಹಳ್ಳಿ ಗ್ರಾಪಂಗೆ ತೆರಳಿ ಪರಿಶೀಲನೆ ನಡೆಸಿದರು. ಅಷ್ಟರಲ್ಲಿ 9 ಲಕ್ಷ ರು. ಹಣ ಆನ್ಲೈನ್ ಮೂಲಕ ಪಾವತಿಯಾಗಿದ್ದು, ಉಳಿದ ಹಣಪಾವತಿ ಯಾಗುವಷ್ಟರಲ್ಲಿ ಖಾತೆಯನ್ನು ಬಂದ್ ಮಾಡಿಸಿ ಅಕ್ರಮ ಹಣ ಪಾವತಿಗೆ ಬ್ರೇಕ್ ಹಾಕಿಸಿದ್ದಾರೆ.
ಮೂರು ದಿನದಲ್ಲಿ ಹಣ ವರ್ಗಾವಣೆ
ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಲಕ್ಷ್ಮೀ ಅವರು 16 ದಿನ ರಜೆಯ ಮೇಲೆ ತೆರಳಿದ್ದರು. ಈ ಸಮಯದಲ್ಲಿ ಮಂಡ್ಯ ತಾಲೂಕು ಆಲಕೆರೆ ಗ್ರಾ ಪಂ ಪಿಡಿಒ ಶ್ರೀನಿವಾಸ್ ಅವರನ್ನು ತಗ್ಗಹಳ್ಳಿ ಪಿಡಿಒ ಹುದ್ದೆಯನ್ನು ಪ್ರಭಾರಿಯಾಗಿ ನೀಡಲಾಗಿತ್ತು. ಹತ್ತು ದಿನದಲ್ಲಿ ಮೂರು ದಿನ ಸರ್ಕಾರಿ ರಜೆ ಇದ್ದು, ಕೆಲಸ ನಿರ್ವಹಿಸಿರುವುದು ಏಳು ದಿನ ಮಾತ್ರ. ಈ ಏಳು ದಿನದ ಅವಧಿಯಲ್ಲಿ ಜ.29, 30, 31ರ ಮೂರು ದಿನಗಳಲ್ಲೇ 54 ಲಕ್ಷ ರು. ಹಣವನ್ನು ಹದಿನೈದನೇ ಹಣಕಾಸು ಯೋಜನೆಯಡಿ ಸೋಲಾರ್ಲೈಟ್ಗಳು, ಪೈಪ್ ಗಳು ಹಾಗೂ ಎಲೆಕ್ನಿಕ್ ಸಾಮಗ್ರಿ ಗಳನ್ನು ಖರೀದಿ ಮಾಡಿರುವುದಕ್ಕೆ ಯಾವುದೇ ವೋಚರ್ಗಳಿಲ್ಲದಿದ್ದರೂ ಆನ್ಲೈನ್ ಪಾವತಿ, ಚೆಕ್ಗಳ ಮೂಲಕ ಹಣ ಪಾವತಿಸಿರುವುದು ಕಂಡುಬಂದಿದೆ.
ಇದೆಲ್ಲಾ ಪೂರ್ವ ಯೋಜಿತವೇ?
ಆಲಕೆರೆ ಪಿಡಿಒ ಶ್ರೀನಿವಾಸಯ್ಯ ತಗ್ಗಹಳ್ಳಿ ಗ್ರಾಪಂ ಪ್ರಭಾರಿ ಹುದ್ದೆ ಯನ್ನು ಜ.23ರಂದು ವಹಿಸಿಕೊಂ ಡಿದ್ದು, ಅಂದು ಸಂಜೆ 4 ಗಂಟೆಗೆ ಡಾಂಗಲ್ ದೊರಕಿದೆ. ಜ.24, 25, 26 ರಜೆ ಇದ್ದು, ಜ.27ಕ್ಕೆ ಸಭೆ ನಡೆಸಿದ್ದಾರೆ. ಜ.29, 30, 31 ಮೂರು ದಿನಗಳಲ್ಲಿ 54 ಲಕ್ಷ ರು. ಅಕ್ರಮ ವರ್ಗಾವಣೆ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶ್ರೀನಿವಾಸಯ್ಯ ರವರು ಹಿಂದೆ ನಾಲ್ಕೈದು ಬಾರಿ ಅಮಾನತ್ತುಗೊಂಡಿರುವ ವಿಷಯ ತಿಳಿದಿದ್ದರೂ ಅದೇ ಅಧಿಕಾರಿಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ಪ್ರಭಾರ ನೀಡಿದ್ದು ಯಾಕೆ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ವ್ಯಕ್ತವಾಗಿವೆ. ಇದೇ ಪಿಡಿಒ ಶ್ರೀನಿವಾಸಯ್ಯ ಬೇಲೂರು ಪಂಚಾಯ್ತಿ ಪ್ರಭಾರ ಪಿಡಿಒ ಆಗಿದ್ದ ವೇಳೆಯೂ ಅಕ್ರಮ ಬಿಲ್ ಮಾಡಿದ್ದ ಕಾರಣಕ್ಕೆ ಕರ್ತವ್ಯ ದಿಂದ ಅಮಾನತುಗೊಂಡಿದ್ದರು ಎಂದು ತಿಳಿದುಬಂದಿದೆ.
15 ನೇ ಹಣಕಾಸು ಯೋಜನೆಯಡಿ ವಿವಿಧ ಸಾಮಗ್ರಿಗಳ ಖರೀದಿಗೆ 54 ಲಕ್ಷ ರು. ಹಣವನ್ನು ಅಕ್ರಮವಾಗಿ ಪಾವತಿಸಲಾಗಿದೆ. ಮೂರು ದಿನಗಳಲ್ಲಿ ಇಷ್ಟೊಂದು ಮೊತ್ತದ ಹಣ ಪಾವತಿಸಿರುವುದು ಅಚ್ಚರಿಗೂ ಕಾರಣವಾಗಿದೆ. ಇ-ಸ್ವರಾಜ್ ಆ್ಯಪ್ ಮೂಲಕ ಹಣ ಪಾವತಿ ಮಾಡಿರುವುದು ತಿಳಿದ ತಕ್ಷಣವೇ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿದಾಗ 9 ಲಕ್ಷ ರು. ಹಣ ಈಗಾಗಲೇ ಹಲವರಿಗೆ ಪಾವತಿಯಾಗಿದ್ದು, ಉಳಿಕೆ ಹಣಕ್ಕೆ ಬ್ರೇಕ್ ಹಾಕಲಾಗಿದೆ ಎಂದು ದೂರುದಾರ ಮಹೇಂದ್ರ ಈ ಕುರಿತು ಮಾಹಿತಿ ನೀಡಿದರು.

Leave a Reply